ಬೆಂಗಳೂರು: ವಿಟಿಯು ವಿದ್ಯಾರ್ಥಿಗಳು ಇನ್ನು ಮುಂದೆ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಇಂಟರ್ನ್ಶಿಪ್ ಮಾಡಬಹುದಾಗಿದೆ.
ಈ ಮೊದಲು ವಿಟಿಯು ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಮಾತ್ರ ಇಂಟರ್ನ್ ಶಿಪ್ ಗೆ ಅವಕಾಶ ನೀಡಲಾಗಿತ್ತು. ಇಂಟರ್ನ್ಶಿಪ್ ವೇಳೆ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ಹೋದಾಗ ತರಗತಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಆನ್ಲೈನ್ ತರಗತಿ ಆರಂಭಿಸಿರುವ ವಿಟಿಯು ದೇಶ ವಿದೇಶಗಳ ಯಾವುದೇ ಭಾಗದಲ್ಲಿ ಬೇಕಾದರೂ ಇಂಟರ್ನೆಟ್ ಶಿಪ್ ಮಾಡಲು ಅವಕಾಶ ಕಲ್ಪಿಸಿದೆ.
ಏಳು ಮತ್ತು ಎಂಟನೇ ಸೆಮಿಸ್ಟರ್ ಗಳನ್ನು ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇಂಟರ್ನ್ಶಿಪ್ ಮತ್ತು ಪ್ರಾಜೆಕ್ಟ್ ವರ್ಕ್ ಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ವಿವಿಧ ಕಂಪನಿಗಳಲ್ಲಿ ಇಂಟರ್ನ್ಶಿಪ್ ಪಡೆದುಕೊಳ್ಳುವ ವಿದ್ಯಾರ್ಥಿಗಳು ಮಾಹಿತಿಯನ್ನು ವಿಟಿಯುಗೆ ಸಲ್ಲಿಸಬೇಕು. ಕೆಲವು ವೇಳೆ ಪ್ಲೇಸ್ಮೆಂಟ್ ಅವಧಿಯಲ್ಲಿ ವಿಟಿಯು ವಿದ್ಯಾರ್ಥಿಗಳಿಗೆ ಇಂಟರ್ನೆಟ್ ದೊರಕಿಸಿಕೊಡಲಿದೆ. ಅಲ್ಲದೆ ಹಾಜರಾತಿಗೆ ಪರಿಗಣಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಹೊರದೇಶದಲ್ಲಿ ಇಂಟರ್ನ್ಶಿಪ್ ಅವಧಿಯಲ್ಲಿ ಹೆಚ್ಚಿನ ಶಿಷ್ಯವೇತನ ಪಡೆದುಕೊಳ್ಳಲು ಅವಕಾಶವಿದೆ. ಉತ್ತಮ ಕಂಪನಿಗಳಲ್ಲಿ ಇಂಟರ್ನ್ಶಿಪ್ ಪಡೆದ ನಂತರ ಅದೇ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಿದ್ಯಾರ್ಥಿಗಳ ಕೌಶಲ್ಯ ಕೊರತೆ ನೀಗಿಸಲು ಅಂತಿಮ ವರ್ಷದಲ್ಲಿ ಇಂಟರ್ನ್ಶಿಪ್ ಕಡ್ಡಾಯ ಮಾಡಿದ್ದು, ಅದನ್ನು ದೇಶವಿದೇಶದಲ್ಲಿಯೂ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.