ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮೌಲ್ಯಮಾಪನ ವಿಭಾಗದ ಎಡವಟ್ಟಿನಿಂದ ಗರಿಷ್ಠ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಗಮನಕ್ಕೆ ಬಂದ ಕೂಡಲೇ ಈ ಲೋಪ ಸರಿಪಡಿಸಲಾಗಿದ್ದು, ಫಲಿತಾಂಶ ತಿದ್ದುಪಡಿ ಮಾಡಲಾಗಿದೆ. ಮೊದಲಿಗೆ ಪ್ರಕಟಿಸಲಾಗಿದ್ದ ಫಲಿತಾಂಶದಲ್ಲಿ ಪಾಸ್ ಆಗಿದ್ದವರು ಎರಡನೇ ಸಲ ಪ್ರಕಟಿಸಲಾದ ಫಲಿತಾಂಶದಲ್ಲಿ ಫೇಲ್ ಆಗಿದ್ದಾರೆ.
100 ಅಂಕದ ಪರೀಕ್ಷೆಗೆ ಅದಕ್ಕಿಂತಲೂ ಹೆಚ್ಚಿನ ಅಂಕಗಳನ್ನು ನೀಡಲಾಗಿದ್ದು, ಕೆಲವು ವಿದ್ಯಾರ್ಥಿಗಳು ವಿವಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಲೋಪ ಸರಿಪಡಿಸಿ ಫಲಿತಾಂಶ ಪ್ರಕಟಿಸಿದಾಗ ಏಕಾಏಕಿ ವಿದ್ಯಾರ್ಥಿಗಳ ಅಂಕಗಳು ಕಡಿಮೆಯಾಗಿವೆ. ಮೊದಲಿನ ಫಲಿತಾಂಶದಲ್ಲಿ ಪಾಸಾಗಿದ್ದ ಕೆಲವು ವಿದ್ಯಾರ್ಥಿಗಳು ಎರಡನೇ ಸಲದ ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದಾರೆ.
ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡು ವಿವಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಲೋಪ ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಫಲಿತಾಂಶವನ್ನು ಮಂಗಳವಾರ ಆನ್ಲೈನ್ನಲ್ಲಿ ವಿಟಿಯು ಪ್ರಕಟಿಸಿದೆ. ಭಾರತೀಯ ಸಂವಿಧಾನ, ಪ್ರೊಫೆಷನಲ್ ಎಥಿಕ್ಸ್ ಮತ್ತು ಸೈಬರ್ ಲಾ ವಿಷಯದಲ್ಲಿ ಗರಿಷ್ಠ ಅಂಕಗಳಿಗಿಂತಲೂ ಹೆಚ್ಚಿನ ಅಂಕಗಳನ್ನು ನೀಡಲಾಗಿದೆ. 60 ಅಂಕಗಳಿಗೆ ಲಿಖಿತ ಪರೀಕ್ಷೆ, 40 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಇರುತ್ತದೆ. 100 ಅಂಕಗಳಿಗೆ ಫಲಿತಾಂಶ ನೀಡುವ ಬದಲು ಹಲವು ವಿದ್ಯಾರ್ಥಿಗಳಿಗೆ 103, 106 ಅಂಕಗಳನ್ನು ನೀಡಲಾಗಿತ್ತು.