
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರ ವಿರುದ್ಧ ದೂರು ನೀಡಲು ಜೆಡಿಎಸ್ ತಯಾರಿ ನಡೆಸಿದೆ.
ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಅವರ ವಿರುದ್ಧ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರು ನೀಡಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.
ಜೆಡಿಎಸ್ ಪಕ್ಷದ ಸಚೇತಕ ವೆಂಕಟರಾವ್ ನಾಡಗೌಡ ಅವರು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತ ಹಾಕುವಂತೆ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ನೀಡಿದ್ದರು. ಹೀಗಿದ್ದರೂ, ವಿಪ್ ಉಲ್ಲಂಘಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಅಭ್ಯರ್ಥಿ ಗೆ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ಈ ಇಬ್ಬರು ಶಾಸಕರ ವಿರುದ್ಧ ವಿಧಾನಸಭೆ ಸ್ಪೀಕರ್ ಗೆ ದೂರು ನೀಡಲಾಗುವುದು ಎಂದು ಹೇಳಲಾಗಿದೆ.