ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ, ತುಮಕೂರಿನಲ್ಲಿ ಸಿದ್ದಲಿಂಗ ಶ್ರೀಗಳು ಮತದಾನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ದಂಪತಿ ಮತದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುಧಾ ಮೂರ್ತಿ, ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. ನಾರಾಯಣಮೂರ್ತಿ ಅವರಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಡಿಸ್ಚಾರ್ಜ್ ಮಾಡಿಸಿಕೊಂಡು ಬಂದು ಮತದಾನ ಮಾಡಲಾಗಿದೆ. ಮತದಾರರು ಹಿಂದೆ ನಿಂತು ಮಾತನಾಡದೆ ಮುಂದೆ ಬಂದು ಮತ ಹಾಕಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದ್ದಾರೆ.
ಶಾಸಕ ಕೆ. ಗೋಪಾಲಯ್ಯ ದಂಪತಿ ಮತ ಚಲಾಯಿಸಿದ್ದಾರೆ. ಪುತ್ರನ ಮದುವೆ ಸಂಭ್ರಮದ ನಡುವೆಯೂ ಕೆ. ಗೋಪಾಲಯ್ಯ ದಂಪತಿ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡಿ ಮದುವೆ ಮನೆಗೆ ತೆರಳಿದ್ದಾರೆ. ಮದುವೆ ಮುಗಿದ ನಂತರ ಮದುಮಕ್ಕಳು ಮತ ಚಲಾಯಿಸಲಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ರಾಜರಾಜೇಶ್ವರಿ ನಗರ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ. ಸುಧಾಕರ್, ತುಮಕೂರು ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ ಕೂಡ ಮತ ಚಲಾಯಿಸಿದ್ದಾರೆ.