ನವದೆಹಲಿ: 7 ಹಂತದ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.
ಮುಜಾಫರ್‌ನಗರ, ಮೀರತ್, ಬಾಗ್ ಪತ್, ಘಾಜಿಯಾಬಾದ್, ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಬುಲಂದ್‌ಶಹರ್, ಅಲಿಗಢ, ಆಗ್ರಾ ಮತ್ತು ಮಥುರಾ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಮೊದಲ ಹಂತದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಹಂತದಲ್ಲಿ ಸುಮಾರು 2.27 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಮೊದಲ ಹಂತದಲ್ಲಿ ರಾಜ್ಯದ ಪಶ್ಚಿಮ ಯುಪಿ ಮತ್ತು ದೋಬ್ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಜಾಟ್ ಸಮುದಾಯದ ಪ್ರಾಬಲ್ಯವಿರುವ ಪಶ್ಚಿಮ ಯುಪಿಯಲ್ಲಿ ಬಿಜೆಪಿ 17 ಜಾಟ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿಯ ಪ್ರತಿಸ್ಪರ್ಧಿಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಕ್ರಮವಾಗಿ 12 ಮತ್ತು ಆರು ಜಾಟ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
58 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 53 ಸ್ಥಾನಗಳನ್ನು ಗೆದ್ದಿದ್ದು, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಒಂದು ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳ ಪಕ್ಷ ಗೆಲುವು ಸಾಧಿಸಿತ್ತು.
ಇಂದು ಮತದಾನ ಮಾಡಲು ನಾನು ನಾಗರಿಕರನ್ನು ಕೋರುತ್ತೇನೆ. ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೀಡಿಯೊಗ್ರಫಿ ಮಾಡಲಾಗುತ್ತಿದೆ. ಮತಗಟ್ಟೆಗಳಲ್ಲಿ ಎಲ್ಲಾ COVID19 ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದೆ ಎಂದು ಗೌತಮ ಬುದ್ಧ ನಗರ ಡಿಎಂ ಸುಹಾಸ್ LY ತಿಳಿಸಿದ್ದಾರೆ.