ನವದೆಹಲಿ: ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನ ನಡೆದು 11 ದಿನಗಳ ನಂತರ ಚುನಾವಣಾ ಆಯೋಗ ಮತದಾನದ ಅಧಿಕೃತ ಪ್ರಮಾಣ ಪ್ರಕಟಿಸಿದ್ದು, ವಿಪಕ್ಷಗಳು ಕಿಡಿಕಾರಿವೆ.
ಮೊದಲ ಹಂತದಲ್ಲಿ ಶೇಕಡ 66.14, ಎರಡನೇ ಹಂತದಲ್ಲಿ ಶೇಕಡ 66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇಕಡ 69.56ರಷ್ಟು ಮತದಾನವಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಶೇಕಡ 53.17 ರಷ್ಟು ಮಾತ್ರ ಮತದಾನವಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಮೊದಲ ಹಂತದ ಚುನಾವಣೆ ನಡೆದು 11 ದಿನಗಳ ನಂತರ ಮತದಾನ ಪ್ರಕಟಿಸಿದ ಆಯೋಗದ ಕ್ರಮಕ್ಕೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಸಿಪಿಎಂ ಸೇರಿ ಹಲವು ಪಕ್ಷಗಳು ಕಿಡಿಕಾರಿವೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಕಾನೂನು ಬದಲಿಸಿ ಚುನಾವಣಾ ಆಯೋಗವನ್ನು ನಿರ್ನಾಮ ಮಾಡಿದ್ದಾರೆ ಎಂದು ಟೀಕಿಸಿವೆ.