ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಷ್ಟ್ರೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ನಡೆಯಲಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವುದು, ಹೆಸರು ತಪ್ಪಾಗಿರುವುದು, ಭಾವಚಿತ್ರ ಬದಲಾವಣೆ ಮೊದಲಾದ ಲೋಪ ಸರಿಪಡಿಸಿಕೊಳ್ಳಲು ಮತದಾರರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಯಾವುದೇ ತಿದ್ದುಪಡಿ, ಸೇರ್ಪಡೆ ಅಥವಾ ಪಟ್ಟಿಯಿಂದ ಹೆಸರು ಕೈಬಿಡುವುದಿದ್ದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಕುರಿತಾಗಿ ನವೆಂಬರ್ 22, 29, ಡಿಸೆಂಬರ್ 6 ಮತ್ತು 13 ರಂದು ವಿಶೇಷ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
2021 ರ ಜನವರಿ 7 ರಂದು ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಕೊನೆಯ ದಿನವಾಗಿದೆ. ಜನವರಿ 14ರ ಒಳಗೆ ಪೂರಕ ಪಟ್ಟಿ ಮುದ್ರಣವಾಗಲಿದ್ದು, ಜನವರಿ 18 ರಂದು ಮತದಾರರ ಭಾವಚಿತ್ರವಿರುವ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.