ಬೆಂಗಳೂರು: ವೋಟರ್ ಐಡಿ ಇಲ್ಲದ ಕಾರಣ ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಜೆಡಿಎಸ್ ಪಕ್ಷದಿಂದ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್ ಜಾಫರ್ ಅಲಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಪಕ್ಷದ ನಿರ್ದೇಶನದ ಮೇರೆಗೆ ಅವರು ನಾಮಪತ್ರ ಸಲ್ಲಿಸಿದ್ದು, ತಾಂತ್ರಿಕ ಕಾರಣದಿಂದಾಗಿ ನಾಮಪತ್ರ ತಿರಸ್ಕೃತಗೊಂಡಿದೆ. ರಾಜ್ಯದಲ್ಲಿ ಎಲ್ಲಿಯೂ ಜಾಫರ್ ಅಲಿ ಮತದಾರರ ಚೀಟಿ ಹೊಂದಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಅವರ ನಾಮಪತ್ರ ತಿರಸ್ಕರಿಸಿದ್ದಾರೆ.
ಈ ವಿಷಯ ತಿಳಿದ ನಂತರ ಮಂಜುನಾಥ್ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ನಾಮಪತ್ರದ ಜೊತೆಗೆ ಮಂಜುನಾಥ್ ಜೆಡಿಎಸ್ ಪಕ್ಷದ ಬಿ ಫಾರಂ ಸಲ್ಲಿಸಿರಲಿಲ್ಲ. ನಿಗದಿತ ಅವಧಿ ಮುಗಿದ ನಂತರ ಅವರು ನಾಮಪತ್ರ ಸಲ್ಲಿಸಿದ್ದರಿಂದ ಅದನ್ನು ತಿರಸ್ಕರಿಸಲಾಗಿದೆ ಎಂದು ಹೇಳಲಾಗಿದೆ.
ಅಬ್ದುಲ್ ಜಾಫರ್ ಅಲಿ ವಿದೇಶದಲ್ಲಿದ್ದರು. ಅವರು ರಾಜ್ಯಕ್ಕೆ ವಾಪಸಾದ ನಂತರ ರಾಜಕೀಯ ಪ್ರವೇಶಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ರಾಜ್ಯಕ್ಕೆ ಬಂದ ನಂತರ ಯಾವುದೇ ಕ್ಷೇತ್ರದಲ್ಲಿಯೂ ಮತದಾರರ ಚೀಟಿ ಮಾಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.