ಬೆಂಗಳೂರು: ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಇಂದು ಚುನಾವಣ ಆಯೋಗಕ್ಕೆ ದೂರು ನೀಡಲಾಗುವುದು.
ಬೆಳಗ್ಗೆ 11.30 ಕ್ಕೆ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಲಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಹಲವಾರು ನಾಯಕರ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು.
ತನಿಖೆಗೆ ಬಿಜೆಪಿ ಮನವಿ
ಚಿಲುಮೆ ಸಂಸ್ಥೆಯಿಂದ ಆಗಿರುವ ಲೋಪದ ಬಗ್ಗೆ ತನಿಖೆಗೆ ಮನವಿ ಮಾಡಲು ಬಿಜೆಪಿ ಮುಂದಾಗಿದೆ. ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಆಕ್ರಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇಂದು ಬಿಜೆಪಿಯಿಂದ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಚಿಲುಮೆ ಸಂಸ್ಥೆಯಿಂದ ನಡೆದ ಅಕ್ರಮದ ಬಗ್ಗೆ ತನಿಖೆ ನಡೆಸಲು ಮನವಿ ಮಾಡಲಾಗುವುದು.
ಕಾಂಗ್ರೆಸ್ ಧರಣಿ
ಬೆಂಗಳೂರಿನಲ್ಲಿ ವೋಟರ್ ಐಡಿ ಪರಷ್ಕರಣೆಯಲ್ಲಿ ಆಕ್ರಮ ನಡೆಸಿದ ಆರೋಪದಲ್ಲಿ ಹಿನ್ನೆಲೆಯಲ್ಲಿ ಇಂದು ಚುನಾವಣಾ ಆಯೋಗದ ಕಚೇರಿ ಬಳಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಧರಣಿ ನಡೆಸುವ ಸಾಧ್ಯತೆ ಇದೆ.
ಮಧ್ಯಾಹ್ನದೊಳಗೆ ಬಂಧನಕ್ಕೆ ಡಿಕೆಶಿ ಆಗ್ರಹ
ವೋಟರ್ ಐಡಿ ಅಕ್ರಮದ ಬಗ್ಗೆ ಇಂದು ಮಧ್ಯಾಹ್ನದವರೆಗೆ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿದವರನ್ನು ಬಂಧಿಸಬೇಕು. ಇಂದು ಮಧ್ಯಾಹ್ನದೊಳಗೆ ಎಲ್ಲಾ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗಕ್ಕೂ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳುವಂತೆ ಮನವಿ ಮಾಡುತ್ತೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಸಲ್ಲಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪ್ರತಿ ಬೂತ್ ಗಳಲ್ಲಿ ಕಾಂಗ್ರೆಸ್ ಪರಿಶೀಲನೆ, ದೂರು
ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪರಿಶೀಲನೆಗೆ ಮುಂದಾಗಿದ್ದಾರೆ. ಪ್ರತಿ ಬೂತ್ ನಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಲು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕ್ಷೇತ್ರದ ಶಾಸಕರ ಸೂಚನೆ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು ಇಂದಿನಿಂದ ಪ್ರತಿ ಬೂತ್ ಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ. ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ಕೊಡಲು ತಯಾರಿ ಮಾಡಿಕೊಂಡಿದ್ದಾರೆ.