ಬೆಂಗಳೂರು: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಲಾಗಿದೆ.
2017ರಲ್ಲಿ ಸಿದ್ದರಾಮಯ್ಯನವರ ಸರ್ಕಾರವೇ ಕಾರ್ಯಾದೇಶ ನೀಡಿದೆ. ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಕಾರ್ಯ ವಹಿಸಲಾಗಿತ್ತು. ಬಿಎಲ್ಓಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಕೂಡ ನೀಡಲಾಗಿತ್ತು. ಕಾರ್ಯಾದೇಶ ನೀಡುವ ಮೊದಲೇ 6.20 ಲಕ್ಷ ಹೆಸರು ತೆಗೆದಿದ್ದರು. ಎರಡೆರಡು ಕಡೆಗಳಲ್ಲಿ ದಾಖಲಾಗಿದ್ದ ಹೆಸರುಗಳನ್ನು ತೆಗೆಯಲಾಗಿತ್ತು. ಬೆಂಗಳೂರಿನಲ್ಲಿ ಒಟ್ಟು ಮತದಾರರ ಸಂಖ್ಯೆ 91 ಲಕ್ಷ. ಅದರಲ್ಲಿ 27 ಲಕ್ಷ ಹೆಸರು ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪಟ್ಟಿಯಿಂದ ಈಗ 6.74 ಲಕ್ಷ ಮತದಾರರ ಹೆಸರು ತೆಗೆಯಲಾಗಿದೆ. ಅದರಲ್ಲಿ 6.14 ಲಕ್ಷ ಮತದಾರರ ಭಾವಚಿತ್ರ ಎರಡು ಕಡೆ ಇದೆ. ಇದೇ ಕಾರಣಕ್ಕಾಗಿ ಅಂತಹ ಮತದಾರರ ಹೆಸರು ಕೈ ಬಿಡಲಾಗಿದೆ. ಚಿಲುಮೆ ಸಂಸ್ಥೆಗೆ ಮತದಾರರನ್ನು ಕೈ ಬಿಡುವ ಅಧಿಕಾರ ಇಲ್ಲ. ಅದು ಚುನಾವಣಾ ಆಯೋಗದ ಪರಮಾಧಿಕಾರ ಎಂದು ಬಿಜೆಪಿ ಹೇಳಿದೆ.
ಅಕ್ರಮವಾಗಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿದ್ದ ಕಾರಣ ಚಿಲುಮೆ ಸಂಸ್ಥೆಗೆ ನೀಡಲಾಗಿದ್ದ ಗುತ್ತಿಗೆ ರದ್ದಾಯಿತು ಎಂದು ಬಿಜೆಪಿ ತಿಳಿಸಿದ್ದು, ಕಾಂಗ್ರೆಸ್ ಕೇವಲ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದೆ ಎಂದು ದೂರಿದೆ.