
ನವದೆಹಲಿ: ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವ ವಿಧೇಯಕವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.
ಇಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಚುನಾವಣಾ ಕಾನೂನು ತಿದ್ದುಪಡಿ ವಿಧೇಯಕ -2021 ಮಂಡನೆ ಮಾಡಲು ಮುಂದಾಗಿದೆ. ಒಬ್ಬನೇ ಮತದಾರ ಹಲವು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದನ್ನು ಪತ್ತೆ ಹಚ್ಚಿ ಅದನ್ನು ಪಟ್ಟಿಯಿಂದ ತೆಗೆದು ಹಾಕಲು ಇದರಿಂದ ಅನುಕೂಲವಾಗುತ್ತದೆ. ಹೊಸ ಮತದಾರರಿಗೆ ವರ್ಷಕ್ಕೆ ನಾಲ್ಕು ಸಲ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ಸೇನಾಧಿಕಾರಿ ಹುದ್ದೆಯಲ್ಲಿರುವ ಮಹಿಳೆಯ ಪತಿಯನ್ನು ಕೂಡ ಸೇವಾ ಮತದಾರರು ಎಂದು ಪರಿಗಣಿಸುವ ಪ್ರಸ್ತಾಪ ಮಸೂದೆಯಲ್ಲಿದೆ. ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಿ ಸುಧಾರಣೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.