ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಅವಧಿಯೂ ಮುಕ್ತಾಯವಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಎಲ್ಲ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಇದರ ಮಧ್ಯೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕರೊಬ್ಬರು ವಿವಾದದಲ್ಲಿ ಸಿಲುಕಿದ್ದಾರೆ.
ಜಸ್ವಂತ್ ನಗರ ಕ್ಷೇತ್ರದ ಶಾಸಕ ಹಾಗೂ ಸಮಾಜವಾದ ಪಕ್ಷದ ಅಭ್ಯರ್ಥಿಯೂ ಆಗಿರುವ ಶಿವಪಾಲ್ ಯಾದವ್, ಬದೌನ್ ನಲ್ಲಿ ಮಾತನಾಡುವ ವೇಳೆ, ಈ ಚುನಾವಣೆಯಲ್ಲಿ ನಾವು ಎಲ್ಲರ ಮತಗಳನ್ನು ಕೇಳುತ್ತೇವೆ. ನೀವು ನಮಗೆ ಮತ ನೀಡಿದರೆ ಎಲ್ಲವೂ ನೆಟ್ಟಗಿರುತ್ತದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಚಾರಿಸಿಕೊಳ್ಳುತ್ತೇವೆ ಎಂದು ಧಮ್ಕಿ ಹಾಕಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವಪಾಲ್ ಯಾದವ್ ಈ ಮಾತುಗಳನ್ನು ಆಡುವಾಗ ಅವರ ಪುತ್ರ ಆದಿತ್ಯ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮತ್ತೊಬ್ಬ ಶಾಸಕ ಬ್ರಿಜೇಶ್ ಯಾದವ್ ಕೂಡ ಉಪಸ್ಥಿತರಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕರು, ಇದನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರೆ, ವಿರೋಧ ಪಕ್ಷ ಬಿಜೆಪಿ ಇದು ಸಮಾಜವಾದಿ ಪಕ್ಷದ ಮುಖಂಡರ ಗೂಂಡಾಗಿರಿಯನ್ನು ಬಿಂಬಿಸುತ್ತದೆ ಎಂದು ಟೀಕಿಸಿದೆ.