ಕೊರೊನಾ ಎರಡನೇ ಅಲೆ ಮುಗಿಯುತ್ತಿದ್ದಂತೆ ನಿಧಾನವಾಗಿ ಆರ್ಥಿಕ ಬೆಳವಣಿಗೆ ಕಾಣ್ತಿದೆ. ಜನರು ಹೊಸ ವಾಹನ ಖರೀದಿಗೆ ಒಲವು ತೋರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಬರ್ತಿವೆ.
ಸ್ವಿಡನ್ ವಾಹನ ತಯಾರಕ ಸಂಸ್ಥೆಯಾದ ವೋಲ್ವೋ ಕೂಡ ಹೊಸ ಎಸ್‌ಯುವಿ ಎಕ್ಸ್ ಸಿ 90 ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ಬಿಟ್ಟಿದೆ. ಗುರುವಾರ ಭಾರತೀಯ ಮಾರುಕಟ್ಟೆಗೆ ಎಸ್ಯುವಿ ಎಕ್ಸ್ ಸಿ ಕಾರಿನ ಎಂಟ್ರಿಯಾಗಿದೆ. ಕಾರಿನ ಸ್ಟೈಲ್ ಎಲ್ಲರ ಗಮನ ಸೆಳೆದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ 89.9 ಲಕ್ಷ ರೂಪಾಯಿ. ಈ ಕಾರಿಗೆ ಅಡ್ವಾನ್ಸ್ ಏರ್ ಕ್ಲೀನರ್ ತಂತ್ರಜ್ಞಾನವನ್ನು ನೀಡಲಾಗಿದೆ. ಇದು ಕ್ಯಾಬಿನ್‌ನೊಳಗೆ ಪಿಎಂ 2.5 ಮಟ್ಟವನ್ನು ಅಳೆಯುವ ಸಂವೇದಕವನ್ನು ಹೊಂದಿದೆ. ಇದು ಕಾರಿನೊಳಗೆ ಗಾಳಿಯ ಗುಣಮಟ್ಟವನ್ನು ನಿಯಂತ್ರಿಸುವುದರಿಂದ ಆರೋಗ್ಯ ಸಮಸ್ಯೆ ಕಾಡುವುದಿಲ್ಲವೆಂದು ಕಂಪನಿ ಹೇಳಿದೆ.
ಇದು 7 ಆಸನಗಳ ವಾಹನವಾಗಿದೆ. ಸ್ಕೇಲೆಬಲ್ ಪ್ರಾಡಕ್ಟ್ ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲಾಗಿದೆ. ಹೊಸ ವೋಲ್ವೋ ಎಕ್ಸ್ ಸಿ 90 1,969ಸಿಸಿ, ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಘಟಕದಿಂದ ಚಾಲಿತವಾಗಿದ್ದು, ಇದು 300ಬಿಎಚ್ಪಿ ಪವರ್ ಮತ್ತು 420Nm ಪೀಕ್ ಟಾರ್ಕ್ ಹೊರಹಾಕುತ್ತದೆ.
ಇದರ ಇಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಆಲ್-ವೀಲ್ ಡ್ರೈವ್ ಗೆ ಜೋಡಿಸಲಾಗಿದೆ. ವಾಯ್ಸ್-ಆಕ್ಟಿವೇಟೆಡ್ ಕಂಟ್ರೋಲ್‌ನೊಂದಿಗೆ 9-ಇಂಚಿನ ಮಲ್ಟಿಮೀಡಿಯಾ ಟಚ್‌ಸ್ಕ್ರೀನ್, ನ್ಯಾವಿಗೇಷನ್ ಸಿಸ್ಟಮ್ ಮತ್ತು ವೋಲ್ವೋ ಆನ್ ಕಾಲ್ ಕನೆಕ್ಟೆಡ್ ಸರ್ವೀಸ್ ಪ್ಲಾಟ್‌ಫಾರ್ಮ್ ಒಳಗೊಂಡಿದೆ. ಪವರ್-ಚಾಲಿತ ಟೈಲ್‌ಗೇಟ್, ಎಲ್‌ಇಡಿ ಹೆಡ್‌ಲೈಟ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಇದಕ್ಕಿದೆ.