ಬೆಂಗಳೂರು: ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್(VLTD) ಅಳವಡಿಕೆಗೆ ಲಾರಿ ಮಾಲೀಕರ ಸಂಘದಿಂದ ವಿರೋಧ ವ್ಯಕ್ತವಾಗಿದೆ.
VLTD ಅಳವಡಿಸುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಸರಕು ಸಾಗಣೆ ಲಾರಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸೇವೆ ನೀಡುವ ಕ್ಯಾbf, ಶಾಲಾ ವಾಹನಗಳು, ಬಸ್ ಸೇರಿದಂತೆ ಯೆಲ್ಲೋ ಬೋರ್ಡ್ ಅಳವಡಿಸಿರುವ ವಾಹನಗಳು VLTD ಅಳವಡಿಸಿಕೊಳ್ಳುವ ಗಡುವು ಮುಕ್ತಾಯವಾಗಿದ್ದು, VLTD ಅಳವಡಿಸಿಕೊಳ್ಳದ ವಾಹನಗಳಿಗೆ ದಂಡ ವಿಧಿಸುವ ಜೊತೆಗೆ ಫಿಟ್ನೆಸ್ ಪ್ರಮಾಣ ಪತ್ರ ನೀಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಆದರೆ, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟವು ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಲ್ಲಿ ಆರ್.ಟಿ.ಒ. ಕಚೇರಿ ಎದುರು ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಇದೀಗ ಲಾರಿ ಮಾಲೀಕರ ಸಂಘದ ಪ್ರಮುಖರು ಕೂಡ ಸಾರಿಗೆ ಇಲಾಖೆ ನಿರ್ಧಾರ ಬದಲಿಸದಿದ್ದರೆ ರಾಜ್ಯಾದ್ಯಂತ ಸರಕು ಸಾಗಣೆ ವಾಹನಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಲಾರಿಗಳು ಯೆಲ್ಲೋ ಬೋರ್ಡ್ ಅಳವಡಿಸಿಕೊಂಡಿದ್ದರೂ ಯಾವುದೇ ಸಾರ್ವಜನಿಕ ಸೇವೆ ನೀಡುತ್ತಿಲ್ಲ. ಲಾರಿಗಳಲ್ಲಿ ಚಾಲಕರು ಮತ್ತು ಕ್ಲೀನರ್ ಗಳು ಮಾತ್ರ ಸಂಚರಿಸುತ್ತಾರೆ. ಹೀಗಾಗಿ ಲಾರಿಗಳಿಗೆ VLTD ಅಳವಡಿಕೆ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದೆ.