ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್ ನಲ್ಲಿ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಗುರುತಿಸಿದ್ದಾರೆ. ಈ ಪ್ರದೇಶಗಳಲ್ಲಿ ಶಾಂತಿಪಾಲನೆ ಸೇರಿದಂತೆ ಮುಂದಿನ ಕ್ರಮಕ್ಕಾಗಿ ರಷ್ಯಾ ಸೇನೆಗೆ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯಿಂದ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿ ದೊಡ್ಡ ಯುದ್ಧಕ್ಕೆ ನಾಂದಿಯಾಗುವ ಆತಂಕ ಎದುರಾಗಿದೆ ಎಂದು ಹೇಳಲಾಗಿದೆ.
ಉಕ್ರೇನ್ ನಲ್ಲಿರುವ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳಿಗೆ ಮನ್ನಣೆ ನೀಡಿದ ನಂತರ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಶಾಂತಿ ಕಾಪಾಡಲು ಎರಡು ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಸೇನೆ ನಿಯೋಜಿಸುವಂತೆ ರಕ್ಷಣಾ ಸಚಿವಾಲಯಕ್ಕೆ ಪುಟಿನ್ ಸೂಚನೆ ನೀಡಿದ್ದಾರೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ತೀವ್ರ ವಿರೋಧ ಮತ್ತು ನಿರ್ಬಂಧ ಹೇರುವ ಎಚ್ಚರಿಕೆ ನಡುವೆಯೂ ಪುಟಿನ್ ಇಂತಹ ಕ್ರಮಕೈಗೊಂಡಿದ್ದಾರೆ.
ರಷ್ಯಾ ಮಿಲಿಟರಿ ಕ್ರಮವನ್ನು ಪಶ್ಚಿಮ ಉಕ್ರೇನ್ ಆಕ್ರಮಣದ ಪ್ರಾರಂಭವೆಂದು ಪರಿಗಣಿಸಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರೋಧದ ನಡುವೆಯೂ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಲು ರಷ್ಯಾ ಮುಂದಾಗಿದೆ. ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಬೆಂಬಲಕ್ಕೆ ನಿಲ್ಲುವ ಮತ್ತು ಶಾಂತಿ ಕಾಪಾಡಲು ಸೇನೆ ನಿಯೋಜಿಸುವ ಹೆಸರಲ್ಲಿ ಈ ಪ್ರದೇಶವನ್ನು ರಷ್ಯಾ ನೆಲೆಯಾಗಿ ಮಾಡಿಕೊಳ್ಳಲು ಪುಟಿನ್ ಪ್ಲಾನ್ ಮಾಡಿಕೊಂಡಿದ್ದಾರೆ.
ಈ ಪ್ರದೇಶಗಳಿಗೆ ಪುಟಿನ್ ರವಾನೆ ಮಾಡುತ್ತಿರುವ ಸೈನ್ಯದ ಬಲ ಎಷ್ಟು ಎನ್ನುವುದು ಗೊತ್ತಾಗಿಲ್ಲ. ಆದರೆ, ಭಾರಿ ಪ್ರಮಾಣದ ಸೇನೆಯನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ರಷ್ಯಾ ಈಗ ಬೇರ್ಪಟ್ಟ ಪ್ರದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿ ಈ ಮೂಲಕ ಹಿಡಿತ ಸಾಧಿಸಲು ಮುಂದಾಗಿದೆ. ಹೀಗಾಗಿ ಶಾಂತಿಪಾಲನೆ ಹೆಸರಲ್ಲಿ ಸೇನೆಯನ್ನು ರವಾನೆ ಮಾಡಲು ಸೂಚನೆ ನೀಡಲಾಗಿದೆ.
ದೂರದರ್ಶನದ ಭಾಷಣದಲ್ಲಿ ಪುಟಿನ್, ಉಕ್ರೇನ್ ರಷ್ಯಾದ ಇತಿಹಾಸದ ಅವಿಭಾಜ್ಯ ಅಂಗವೆಂದು ಹೇಳಿದ್ದಾರೆ. ಪೂರ್ವ ಉಕ್ರೇನ್ ರಷ್ಯಾದ ಪ್ರಾಚೀನ ನೆಲೆಯಾಗಿದೆ. ರಷ್ಯಾದ ಜನ ತಮ್ಮ ನಿರ್ಧಾರವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಜರ್ಮನಿ ಮತ್ತು ಫ್ರಾನ್ಸ್ ನಾಯಕರಿಗೆ ದೂರವಾಣಿ ಕರೆ ಮಾಡಿ ಮಾಡಿದ ಪುಟಿನ್ ತಮ್ಮ ನಿರ್ಧಾರವನ್ನು ಘೋಷಿಸಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳ ಎಚ್ಚರಿಕೆಯನ್ನು ಧಿಕ್ಕರಿಸಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ರಷ್ಯಾ ಅಧ್ಯಕ್ಷರು ಸಮಾಲೋಚನೆ ನಡೆಸಿ ಬಿಕ್ಕಟ್ಟು ಬಗೆಹರಿಸಬೇಕು ಎಂದು ಅಭಿಪ್ರಾಯ ಕೂಡ ಕೇಳಿಬಂದಿದೆ. ಪುಟಿನ್ ಜೊತೆ ಷರತ್ತುಬದ್ಧ ಮಾತುಕತೆಗೆ ಬಿಡೆನ್ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಬಿಕ್ಕಟ್ಟು ಶಮನವಾಗಬಹುದು ಎಂದು ಹೇಳಲಾಗಿದೆ.
ಉಕ್ರೇನ್ ನಿಂದ ಪ್ರತ್ಯೇಕವೆಂದು ಗುರುತಿಸಲಾದ ಪ್ರದೇಶಗಳಲ್ಲಿ ಹೊಸ ಹೂಡಿಕೆ ವ್ಯಾಪಾರ ಕೈಗೊಳ್ಳಲು ಅಮೆರಿಕ ವ್ಯಕ್ತಿಗಳಿಗೆ ನಿರ್ಬಂಧ ಇದೆ ಎಂದು ಶ್ವೇತಭವನದ ಹೋಗ್ತಾರ ಜೆನ್ ಸಾಕಿ ಹೇಳಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ನಿರ್ಬಂಧ ಕ್ರಮಗಳು ಜಾರಿಯಾಗಲಿವೆ ಎಂದು ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯು ಮೂಲಕ ರಷ್ಯಾ ಲಾಭ ಪಡೆಯುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಉಕ್ರೇನ್ ಮೇಲೆ ಯುದ್ಧ ನಡೆಸಲು ಸಕಲ ರೀತಿಯಲ್ಲಿ ಸಜ್ಜಾಗಿರುವ ರಷ್ಯಾದ ಆಕ್ರಮಣ ನೀತಿಯನ್ನು ಶಮನಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ. ಷರತ್ತುಬದ್ಧ ಮಾತುಕತೆಗೆ ಅಮೆರಿಕ ಅಧ್ಯಕ್ಷರ ಒಪ್ಪಿಗೆ ಸೂಚಿಸಿದ್ದಾರೆ. ಉಕ್ರೇನ್ ಗಡಿಯಲ್ಲಿ ಒಂದೂವರೆ ಲಕ್ಷದಷ್ಟು ಸೈನಿಕರು ಬೀಡುಬಿಟ್ಟಿದ್ದಾರೆ. ರಷ್ಯಾ ಯಾವಾಗ ಬೇಕಾದರೂ ಆಕ್ರಮಣ ಮಾಡುವ ಸಾಧ್ಯತೆ ಇರುವುದರಿಂದ ಷರತ್ತುಬದ್ಧ ಮಾತುಕತೆಗೆ ಅಮೆರಿಕ ಮುಂದಾಗಿದೆ.
ಸೋವಿಯತ್ ಒಕ್ಕೂಟ ಪತನದ ನಂತರ ಬೇರೆಯಾದ ಅನೇಕ ದೇಶಗಳ ಮೇಲೆ ರಷ್ಯಾ ಪ್ರಭಾವ ಪುನಃಸ್ಥಾಪಿಸಲು ಪುಟಿನ್ ಅನೇಕ ವರ್ಷ ಪ್ರಯತ್ನ ನಡೆಸಿದ್ದಾರೆ. ಉಕ್ರೇನ್ ಮೇಲೆ ಪ್ರಭುತ್ವ ಸಾಧಿಸುವುದು ಅವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿದೆ. ಈಗಿನ ಪರಿಸ್ಥಿತಿಯಲ್ಲಿ ರಷ್ಯಾ ಆಕ್ರಮಣಕಾರಿ ನೀತಿಗೆ ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆರ್ಥಿಕ ದಿಗ್ಬಂಧನದ ಎಚ್ಚರಿಕೆಯನ್ನು ನೀಡಿದೆ. ಹೀಗಿದ್ದರೂ ಯುದ್ಧಕ್ಕೆ ರಷ್ಯಾ ಸನ್ನದ್ಧವಾಗಿರುವುದರಿಂದ ಅಮೆರಿಕ ಅಧ್ಯಕ್ಷ ಬಿಡೆನ್ ಅವರು ಷರತ್ತುಬದ್ಧ ಮಾತುಕತೆಗೆ ಒಪ್ಪಿಗೆ ನೀಡಿದ್ದಾರೆ.