ಜೈಲುವಾಸದಿಂದ ಬಿಡುಗಡೆಯಾಗಿ ಬಂದಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಸಕ್ರಿಯ ರಾಜಕಾರಣಕ್ಕೆ ಮತ್ತೆ ಬರಲಿದ್ದಾರೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಜೋರಾಗಿ ಕೇಳಲಾರಂಭಿಸಿವೆ.
ಕೋವಿಡ್-19 ಸಂಕಷ್ಟದ ಪರಿಸ್ಥಿತಿ ತಿಳಿಗೊಳ್ಳುತ್ತಲೇ ಸಕ್ರಿಯ ರಾಜಕೀಯಕ್ಕೆ ಮರಳಿ, ಪಕ್ಷದೊಳಗಿನ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ಎಐಎಡಿಎಂಕೆ ಕಾರ್ಯಕರ್ತರೊಬ್ಬರೊಂದಿಗೆ ಶಶಿಕಲಾ ಆಡಿಯೋ ಕರೆಯೊಂದರ ಮೂಲಕ ಮಾತನಾಡಿರುವುದು ಹೊಸ ಅಂತೆಕಂತೆಗಳಿಗೆ ದಾರಿ ಮಾಡಿಕೊಟ್ಟಿವೆ.
ಮಾಜಿ ಮುಖ್ಯಮಂತ್ರಿ ಜಯಲಲಿತಾರ ಬಹುಕಾಲದ ಆಪ್ತೆಯಾಗಿದ್ದ ಶಶಿಕಲಾ ಪ್ರಾಂತೀಯ ಪಕ್ಷದ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಎಂದು ಚೆನ್ನೈನ ರಾಜಕೀಯ ವಲಯಗಳಲ್ಲಿ ಮಾತುಗಳು ಕೇಳಿಬರುತ್ತಿವೆ.
ಚುನಾವಣೆ ಬಳಿಕ ಮಾಜಿ ಮುಖ್ಯಮಂತ್ರಿಗಳೂ, ಎಐಎಡಿಎಂಕೆ ವರಿಷ್ಠರೂ ಆದ ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ನಡುವೆ ಶೀತಲ ಸಮರ ಜೋರಾಗಿದ್ದು ಈ ಭಿನ್ನಾಭಿಪ್ರಾಯಗಳನ್ನು ಶಶಿಕಲಾ ಸರಿದೂಗಿಸಲು ಯತ್ನಿಸಲಿದ್ದಾರೆ ಎನ್ನಲಾಗುತ್ತಿದೆ.