ಭುವನೇಶ್ವರ: ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರ ನಿಕಟವರ್ತಿ ವಿ.ಕೆ. ಪಾಂಡಿಯನ್ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳದ ಹೀನಾಯ ಸೋಲಿನ ನಂತರ ಸಕ್ರಿಯ ರಾಜಕೀಯವನ್ನು ತೊರೆಯುವುದಾಗಿ ಭಾನುವಾರ ಘೋಷಿಸಿದ್ದಾರೆ.
147 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎರಡು ದಶಕಗಳಿಂದ ಒಡಿಶಾವನ್ನು ಆಳಿದ ಬಿಜೆಡಿ ಕೇವಲ 51 ಸ್ಥಾನ ಗಳಿಸಿ ಹೀನಾಯವಾಗಿ ಸೋಲು ಕಂಡಿದೆ. ಹೀಗಾಗಿ ಪಾಂಡಿಯನ್ ಇಂತಹ ನಿರ್ಧಾರ ಕೈಗೊಂಡಿದ್ದಾರೆ.
ಪಾಂಡಿಯನ್ ತಮಿಳು ಮೂಲದವರು. ನವೀನ್ ಪಟ್ನಾಯಕ್ ಅವರ ನಿಕಟವರ್ತಿಯಾಗಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಬಿಜೆಡಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕ್ಷಮೆಯಾಚಿಸಿದ್ದಾರೆ. ಯಾವುದೇ ಸಂಪತ್ತನ್ನು ನಾನು ಸಂಗ್ರಹಿಸಿಲ್ಲ. ನಾಗರಿಕ ಸೇವೆಯ ಆರಂಭದಿಂದ ಇಲ್ಲಿಯವರೆಗೆ ಸಂಪತ್ತು ಎಷ್ಟಿತ್ತೋ ಹಾಗೆಯೇ ಇದೆ ಎಂದು ಅವರು ಸ್ಪಷ್ಟಪಡಿಸಿದ್ದು, ಒಡಿಶಾದ ಜನತೆ ಮತ್ತು ಜಗನ್ನಾಥ ದೇವರು ತಮ್ಮ ಹೃದಯದಲ್ಲಿರುತ್ತಾರೆ ಎಂದು ಹೇಳಿದರು.
‘ದುರದೃಷ್ಟಕರ’: ಪಾಂಡ್ಯನ್ ಟೀಕೆಗೆ ನವೀನ್ ಪಟ್ನಾಯಕ್
ಬಿಜು ಜನತಾ ದಳದ ಮುಖ್ಯಸ್ಥ ಮತ್ತು ಮಾಜಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪಾಂಡಿಯನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಅವರ ವಿರುದ್ಧದ ಟೀಕೆಯನ್ನು “ದುರದೃಷ್ಟಕರ” ಎಂದು ಕರೆದ ನವೀನ್, ಯಾವುದೇ ಹುದ್ದೆಗಳನ್ನು ಹೊಂದದೆ ಪಾಂಡಿಯನ್ “ಅತ್ಯುತ್ತಮ ಕೆಲಸ” ಮಾಡಿದ್ದಾರೆ. ಚಂಡಮಾರುತಗಳು ಮತ್ತು COVID-19 ಸಾಂಕ್ರಾಮಿಕದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಂಡಿಯನ್ ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
“ಪಾಂಡಿಯನ್ ಬಗ್ಗೆ ಕೆಲವು ಟೀಕೆಗಳಿವೆ. ಇದು ದುರದೃಷ್ಟಕರ. ಪಕ್ಷಕ್ಕೆ ಸೇರ್ಪಡೆಗೊಂಡ ಅವರು ಯಾವುದೇ ಹುದ್ದೆಯನ್ನು ಅಲಂಕರಿಸಿಲ್ಲ. ಅವರು ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿಲ್ಲ ಎಂದು ಪಟ್ನಾಯಕ್ ಹೇಳಿದ್ದಾರೆ.