ಎಲ್ಲಾ ಬಗೆಯ ಪೋಷಕಾಂಶಗಳು ನಮ್ಮ ದೇಹಕ್ಕೆ ಬೇಕು. ಅವುಗಳಲ್ಲಿ ಯಾವುದಾದರೂ ಒಂದರ ಕೊರತೆಯಿದ್ದರೂ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ವಿಟಮಿನ್ ಡಿ ಕೂಡ ನಮಗೆ ಅತ್ಯಗತ್ಯವಾಗಿದೆ. ಸಾಮಾನ್ಯವಾಗಿ ಸೂರ್ಯನ ಬೆಳಕಿನಲ್ಲಿ ಕಂಡುಬರುವ ಪೋಷಕಾಂಶ ಇದು. ಕೆಲವು ಆಹಾರ ಮತ್ತು ಪಾನೀಯಗಳಲ್ಲಿಯೂ ಇರುತ್ತದೆ.
ಇದನ್ನು ಸನ್‌ಶೈನ್ ವಿಟಮಿನ್ ಎಂದೂ ಕರೆಯುತ್ತಾರೆ. ಅನೇಕ ಜನರು ಸೂರ್ಯನ ಬೆಳಕಿನಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ. ಸೂರ್ಯನ ಬಿಸಿಲು ಮೈಮೇಲೆ ಬಿದ್ದರೆ ಚರ್ಮ ಹಾಳಾಗುತ್ತದೆ ಅನ್ನೋದು ಅವರ ಭಾವನೆ. ಆದ್ರೆ ಸೂರ್ಯನ ಬೆಳಕು ವಿಟಮಿನ್ ಡಿ ಕೊರತೆಯನ್ನು ನೀಗಿಸುತ್ತದೆ. ವಿಟಮಿನ್ ಡಿ ಕೊರತೆಯಿಂದ ನಮ್ಮ ದೇಹವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೂಳೆಗಳು ಮತ್ತು ಹಲ್ಲುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ವಿಟಮಿನ್ ಡಿ ಕೊರತೆಯಾದಾಗ ನಮ್ಮ ದೇಹವು ಯಾವ ರೀತಿಯ ಎಚ್ಚರಿಕೆಯ ಸಂಕೇತವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಮೂಳೆ ನೋವು: ನಮ್ಮ ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ ಕೂಡ ಬೇಕು. ಈ ಪೋಷಕಾಂಶದ ಕೊರತೆಯಿದ್ದರೆ, ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು, ಹಲ್ಲುಗಳು ಮತ್ತು ದೇಹದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚು ಆಯಾಸದ ಅನುಭವವಾಗುತ್ತದೆ.
ಗಾಯ ಗುಣವಾಗಲು ಹೆಚ್ಚು ಸಮಯ: ಸಾಮಾನ್ಯವಾಗಿ ಗಾಯವಾದಾಗ ಅದು ನಾಲ್ಕಾರು ದಿನಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಆದರೆ ಅದು ವಾಸಿಯಾಗಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ ನಿಮ್ಮ ದೇಹದಲ್ಲಿ ಜೀವಸತ್ವಗಳ ಕೊರತೆಯಿದೆ ಎಂದು ಅರ್ಥ. ವಿಟಮಿನ್ ಡಿ ಉರಿಯೂತ ಮತ್ತು ಕಿರಿಕಿರಿಯನ್ನು ತಡೆಯಲು ಸಹಾಯ ಮಾಡುವ ಪೋಷಕಾಂಶವಾಗಿದೆ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ನಮ್ಮ ಮನಸ್ಸು ಸಂಪೂರ್ಣವಾಗಿ ಆರೋಗ್ಯಕರವಾಗಿದ್ದಾಗ ಮಾತ್ರ ನಮ್ಮ ದೇಹವನ್ನು ಸಂಪೂರ್ಣವಾಗಿ ಫಿಟ್ ಎಂದು ಪರಿಗಣಿಸಲಾಗುತ್ತದೆ. ನೀವು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದರೆ ಬೇಗನೆ ಖಿನ್ನತೆಗೆ ಒಳಗಾಗಬಹುದು. ಅನೇಕ ದೇಶಗಳಲ್ಲಿ ಸೂರ್ಯನ ಬೆಳಕು 6 ತಿಂಗಳವರೆಗೆ ತಲುಪುವುದಿಲ್ಲ, ಅಲ್ಲಿನ ಜನರು ಆಗಾಗ್ಗೆ ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ವಾಸ್ತವವಾಗಿ ಸೂರ್ಯನ ಬೆಳಕು ನಮ್ಮ ಮನಸ್ಥಿತಿಯನ್ನು ಸುಧಾರಿಸುವ ಕೆಲಸ ಮಾಡುತ್ತದೆ.