ಕೇಂದ್ರೀಯ ರೈಲ್ವೆಯ ಮುಂಬೈ-ಪುಣೆ ನಡುವೆ ಸಂಚರಿಸುತ್ತಿರುವ ವಿಸ್ತಾಡೋಮ್ ಕೋಚ್ ಗಳಿಗೆ ಪ್ರಯಾಣಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೈಲ್ವೆ ಇಲಾಖೆ ಅಂಕಿಅಂಶಗಳ ಪ್ರಕಾರ, 2021 ರ ಅಕ್ಟೋಬರ್ 1 ರಿಂದ 2022 ರ ಮೇ 23 ರವರೆಗೆ ವಿಸ್ತಾಡೋಮ್ ಕೋಚ್ ಗಳಲ್ಲಿ ಸುಮಾರು 50,000 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ 49,896 ಪ್ರಯಾಣಿಕರು ಪ್ರಯಾಣಿಸಿದ್ದು, ಇವರಿಂದ ರೈಲ್ವೆ ಇಲಾಖೆಗೆ 6.44 ಕೋಟಿ ರೂಪಾಯಿ ಆದಾಯ ಬಂದಿದೆ.
ಈ ಅವಧಿಯಲ್ಲಿ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರು ಪ್ರಯಾಣ ನಡೆಸಿದ್ದು, ಇದರಿಂದ ಇಲಾಖೆಗೆ 3.70 ಕೋಟಿ ರೂಪಾಯಿಗಳ ಆದಾಯ ಬಂದಿದ್ದರೆ, ಡೆಕ್ಕನ್ ಕ್ವೀನ್ ನಲ್ಲಿ ಶೇ.99 ರಷ್ಟು ಪ್ರಯಾಣಿಕರು ಪುಣೆಯಿಂದ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಇದರಿಂದ 1.63 ಕೋಟಿ ರೂಪಾಯಿಗಳ ಆದಾಯ ಬಂದಿದೆ. ಅದೇ ರೀತಿ, ಡೆಕ್ಕನ್ ಎಕ್ಸ್ ಪ್ರೆಸ್ ನಲ್ಲಿ ನೂರಕ್ಕೆ ನೂರರಷ್ಟು ಪ್ರಯಾಣಿಕರು ಪ್ರಯಾಣ ಮಾಡಿದ್ದರಿಂದ ಸಂಸ್ಥೆಗೆ 1.11 ಕೋಟಿ ರೂಪಾಯಿ ಆದಾಯ ಬಂದಿದೆ.
ಕೇಂದ್ರೀಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್ ಅವರು ಈ ಮಾಹಿತಿಯನ್ನು ನೀಡಿದ್ದು, 2018 ರಲ್ಲಿ ಮುಂಬೈ-ಮಡ್ಗಾಂವ್ ನಡುವಿನ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ವಿಸ್ತಾಡೋಮ್ ಕೋಚ್ ಗಳನ್ನು ಪರಿಚಯಿಸಲಾಗಿತ್ತು. ಈ ಕೋಚ್ ಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಜೂನ್ 26, 2021 ರಂದು ಮುಂಬೈ-ಪುಣೆ ಡೆಕ್ಕನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪರಿಚಯಿಸಲಾಗಿತ್ತು. ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಎರಡನೇ ವಿಸ್ತಾಡೋಮ್ ಕೋಚ್ ಅನ್ನು ಮುಂಬೈ-ಪುಣೆ ನಡುವಿನ ಡೆಕ್ಕನ್ ಕ್ವೀನ್ ರೈಲಿನಲ್ಲಿ ಆಗಸ್ಟ್ 15, 2021 ರಂದು ಪರಿಚಯಿಸಲಾಗಿದೆ ಎಂದು ತಿಳಿಸಿದರು.