ಶಿವಮೊಗ್ಗ: ಮಹಾರಾಜರಾದ ಕೃಷ್ಣರಾಜ ಒಡೆಯರ್, ಯೋಜನೆಗಳ ನಿರ್ಮಾತೃ ಸರ್ ಎಂ. ವಿಶ್ವೇಶ್ವರಯ್ಯನವರ ದೂರ ದೃಷ್ಟಿಯೊಂದಿಗೆ ಆರಂಭವಾದ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ವಿಐಎಸ್ಎಲ್ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ಅಧಿವೇಶನ ನಡೆಯುತ್ತಿರುವುದರಿಂದ ಸಾರ್ವಜನಿಕವಾಗಿ ಏನನ್ನೂ ಹೇಳಲು ಆಗುವುದಿಲ್ಲ. ಅಧಿಕಾರಿಗಳೊಂದಿಗೆ ಬಂದಿದ್ದೆ. ಕಾರ್ಖಾನೆ ಪುನಶ್ಚೇತನಗೊಳಿಸುವ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದೇನೆ. ವಿಶ್ವೇಶ್ವರಯ್ಯನವರ ಹೆಸರಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಂಸದ ರಾಘವೇಂದ್ರ, ದಿ. ಅಪ್ಪಾಜಿಗೌಡರು ಕಾರ್ಖಾನೆ ಉಳಿವಿಗಾಗಿ ಪ್ರಯತ್ನ ನಡೆಸಿದ್ದಾರೆ. ನಾಡಿನ ಜನತೆ, ಭಗವಂತನ ಅವಕಾಶದಿಂದ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಎನ್.ಡಿ.ಎ. ಸರ್ಕಾರ ರಚನೆಯಾಗಿದೆ. ನನಗೆ ಬೃಹತ್ ಕೈಗಾರಿಕೆ, ಉಕ್ಕು ಸಚಿವನಾಗುವ ಅವಕಾಶ ಸಿಕ್ಕಿದೆ. ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಉಳಿವಿಗೆ ಎಲ್ಲಾ ಮಾಹಿತಿ ಪಡೆಯುವ ಉದ್ದೇಶದಿಂದಲೇ ನಾನು ಮತ್ತು ಸೇಲ್ ಅಧ್ಯಕ್ಷರು ಬಂದು ಪರಿಶೀಲಿಸಿ ಮಾಹಿತಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಆಡಳಿತ ಮಂಡಳಿ, ನೌಕರರು, ಕಾರ್ಮಿಕರೊಂದಿಗೆ ಚರ್ಚೆ ನಡೆಸಿದ್ದೇವೆ. ಕಲಾಪ ನಡೆಯುವಾಗ ಕೆಲವು ನಿರ್ಧಾರ ಸಾರ್ವಜನಿಕವಾಗಿ ಪ್ರಕಟಿಸಲು ಆಗುವುದಿಲ್ಲ. ಜೈರಾಮ್ ರಮೇಶ್ ಅವರು ನನಗೆ ವಿಐಎಸ್ಎಲ್ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ್ದರು. ವಿಐಎಸ್ಎಲ್ ಉಳಿವಿನ ಬಗ್ಗೆ ನಾವು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾರ್ಖಾನೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಆಡಳಿತಕ್ಕೆ ಒಳಪಟ್ಟಿದೆ. ಪ್ರಧಾನಿಯವರ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧಿವೇಶನ ಮುಗಿದ ಬಳಿಕ ದಿನಗೂಲಿ ನೌಕರರ ಬೇಡಿಕೆಯಂತೆ 25 -26 ದಿನ ಕೆಲಸ ಕೊಡುವುದು ಸೇರಿದಂತೆ ದಿನಗೂಲಿ ಕಾರ್ಮಿಕರು, ನಿವೃತ್ತರು ಸೇರಿ ಕಾನೂನು ವ್ಯಾಪ್ತಿಯೊಳಗೆ ಎಲ್ಲರಿಗೂ ಅನುಕೂಲವಾಗುವಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.