ಕರ್ನಾಟಕದ ಹೆಮ್ಮೆಯ ಕಾರ್ಖಾನೆಗಳಲ್ಲಿ ಒಂದಾದ ಹಾಗೂ ಏಷ್ಯಾದಲ್ಲಿ ಅತಿ ದೊಡ್ಡ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೇಂದ್ರ ಸರ್ಕಾರದ ಒಡೆತನದ ವಿಐಎಸ್ಎಲ್ ಗೆ ಈಗ ಬೀಗಮುದ್ರೆ ಹಾಕಲಾಗಿದೆ.
ಕಾರ್ಖಾನೆಯನ್ನು ಪುನರಾರಂಭಿಸುವಂತೆ ಸತತ ಹೋರಾಟಗಳು ನಡೆದಿದ್ದು, ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಇದನ್ನು ಮತ್ತೆ ಆರಂಭಿಸಲು ಪ್ರಯತ್ನ ನಡೆಸುವುದಾಗಿ ಹೇಳಿದ್ದರು.
ಆದರೆ ಮೂಲಗಳ ಪ್ರಕಾರ ಈ ಕಾರ್ಖಾನೆ ಮತ್ತೆ ಆರಂಭವಾಗುವ ಯಾವುದೇ ಸಾಧ್ಯತೆ ಇಲ್ಲ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಬೀಗಮುದ್ರೆ ಹಾಕಿರುವ ಕುರಿತು ಸ್ವತಃ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಮಹೇಂದ್ರನಾಥ್ ಪಾಂಡೆ ಅವರಿಗೆ ಮಾಹಿತಿಯೇ ಇಲ್ಲ.
ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಬಂದಿದ್ದ ಅವರು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಈ ಸಂದರ್ಭದಲ್ಲಿ ವಿಐಎಸ್ಎಲ್ ಕಾರ್ಖಾನೆ ಸ್ಥಿತಿಗತಿ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ತಬ್ಬಿಬ್ಬಾಗಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ.