ಬೆಂಗಳೂರು: ರಾಜ್ಯದ ಎಲ್ಲಾ ಎಸ್.ಪಿ., ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿದಿನ ತಮ್ಮ ವ್ಯಾಪ್ತಿಯ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ಆಗಾಗ ಜನಸ್ಪಂದನ ಸಭೆ ನಡೆಸಬೇಕು ಎಂಬುದು ಸೇರಿ ಅನೇಕ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇತ್ತೀಚೆಗೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಎಸ್ಪಿಗಳು, ಡಿಸಿಪಿಗಳು, ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯನಿರ್ವಹಣೆ ಪರಿಶೀಲಿಸಬೇಕು. ನಾಗರಿಕ ಕೇಂದ್ರಿತ ವಿಧಾನದಲ್ಲಿ ಕಾರ್ಯನಿರ್ವಹಣೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರಮುಖ ಅಪರಾಧಗಳ ಬಗ್ಗೆ ಮಾಹಿತಿ ಬಂದ ತಕ್ಷಣ ಕೃತ್ಯ ನಡೆದ ಸ್ಥಳಗಳಿಗೆ ಎಸ್‌ಪಿಗಳು, ಡಿಸಿಪಿಗಳು ಭೇಟಿ ನೀಡಬೇಕು. ಜೂಜು, ಮಟ್ಕಾ, ಕ್ಲಬ್ ಸೇರಿ ಎಲ್ಲ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಶಾಲೆ, ಕಾಲೇಜುಗಳಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳಗ್ಗೆ 9 ರಿಂದ 11, ಸಂಜೆ 6ರಿಂದ 9ರವರೆಗೆ ಸಮವಸ್ತ್ರದಲ್ಲಿ ಗಸ್ತು ಮಾಡಬೇಕು. ಅಪಘಾತ ನಿಯಂತ್ರಿಸಲು ಹೆದ್ದಾರಿ ಗಸ್ತು ಹೆಚ್ಚಿಸಬೇಕು. ಅಗತ್ಯವಿರುವಲ್ಲಿ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.