ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್ಕುಮಾರ್ ನಮ್ಮನಗಲಿ ಹಲವು ದಿನಗಳೇ ಕಳೆದರೂ ಸಹ ಈಗಲೂ ಅಭಿಮಾನಿಗಳ ಎದೆಯಲ್ಲಿ ಅಪ್ಪು ಜೀವಂತವಾಗಿದ್ದಾರೆ.
ಅಕ್ಟೋಬರ್ 29ರಂದು ಬರಸಿಡಿಲಿನಂತೆ ಬಂದೆರಗಿದ ಈ ಸುದ್ದಿಯನ್ನು ಇನ್ನೂ ಕರುನಾಡಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಭಿಮಾನಿಗಳು ಹಾಗೂ ತಾರೆಯರು ಇನ್ನೂ ಕೂಡ ಅಪ್ಪು ಅಗಲಿಕೆಯ ನೋವಿನಿಂದ ಹೊರಬಂದಿಲ್ಲ.
ಪುನೀತ್ ರಾಜ್ಕುಮಾರ್ ಪರವಾಗಿ ಶಕ್ತಿಧಾಮವನ್ನು ಮುನ್ನೆಡೆಸುವ ಜವಾಬ್ದಾರಿಯನ್ನು ಹೊತ್ತಿರುವ ತಮಿಳು ನಟ ವಿಶಾಲ್, ಪುನೀತ್ ಅಗಲಿಕೆಯ ವಿಚಾರವಾಗಿ ಮಾತನಾಡಿದರು. ಪುನೀತ್ ಸಾವಿನ ಸುದ್ದಿ ಕೇಳಿದ ಬಳಿಕ ನಟ ವಿಶಾಲ್ ಎರಡು ರಾತ್ರಿ ನಿದ್ರೆ ಮಾಡಿರಲೇ ಇಲ್ಲವಂತೆ..! ಪುನೀತ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ವಿಶಾಲ್ ಪುನೀತ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ರು.
ಪುನೀತ್ ನಿಧನದ ವಾರ್ತೆ ಕೇಳಿದ ಬಳಿಕ ವಿಶಾಲ್ 2 ದಿನಗಳ ಕಾಲ ನಿದ್ರಾಹೀನತೆಯಿಂದ ಬಳಲಿದ್ದರಂತೆ.
ಪುನೀತ್ ರಾಜಕುಮಾರ್ ನಡೆಸಿಕೊಂಡು ಹೋಗ್ತಿದ್ದ ಶಕ್ತಿಧಾಮ ಅನಾಥಾಶ್ರಮದಲ್ಲಿ ಮಕ್ಕಳ ಶಿಕ್ಷಣದ ವೆಚ್ಚವನ್ನು ನಿಭಾಯಿಸುವ ಜವಾಬ್ದಾರಿಯನ್ನು ವಿಶಾಲ್ ಹೊತ್ತುಕೊಂಡಿದ್ದಾರೆ.
ನಾನು ಎಲ್ಲರ ಗಮನ ಸೆಳೆಯಬೇಕು ಎಂದು ಈ ಶಕ್ತಿಧಾಮದ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಬದಲಾಗಿ ಪುನೀತ್ ರಾಜ್ಕುಮಾರ್ರ ಸಮಾಜಸೇವೆ ಕಾರ್ಯ ಮುಂದುವರಿಯಬೇಕು ಎಂಬ ಆಶಯದಿಂದ ಇದೊಂದು ವಿನಮ್ರ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ರು.
ಪುನೀತ್ ರಾಜ್ಕುಮಾರ್ ನಿಧನದ ಬಳಿಕ ವಿಶಾಲ್ 1800 ಅನಾಥ ಮಕ್ಕಳ ಜವಾಬ್ದಾರಿಯನ್ನು ಹೊರುವುದಾಗಿ ಭರವಸೆ ನೀಡಿದ್ದರು. ಗಿಡವನ್ನು ನೆಟ್ಟು ಅದಕ್ಕೆ ಪುನೀತ್ ಎಂದು ಹೆಸರಿಡುವ ಮೂಲಕ ನಟನಿಗೆ ಅಂತಿಮ ನಮನ ಸಲ್ಲಿಸಿದ್ದರು. ಪುನೀತ್ ರಾಜ್ಕುಮಾರ್ ನಿವಾಸಕ್ಕೂ ಆಗಮಿಸಿದ್ದ ವಿಶಾಲ್, ಶಿವರಾಜ್ ಕುಮಾರ್ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನದ ನುಡಿಗಳನ್ನಾಡಿದ್ದಾರೆ.