ವಿಶಾಖಪಟ್ಟಣಂ: ರಿಂಗ್ ನೆಟ್ ಬಳಕೆ ಮಾಡಿ ಮೀನುಗಾರಿಕೆ ಮಾಡಲು ನಿಷೇಧವಿರುವ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, 6 ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯಲ್ಲಿ ದೋಣಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿಯಲ್ಲಿ ಈ ಘಟನೆ ನಡೆದಿದೆ.
ರಿಂಗ್ ನೆಟ್ ಬಳಕೆ ಮಾಡಿ ಮೀನುಗಾರಿಕೆಗೆ ನಿಷೇಧವಿದ್ದ ಪ್ರದೇಶದಲ್ಲಿ ಮೀನು ಹಿಡಿಯುವ ಕಾರ್ಯಕ್ಕೆ ಕೆಲವರು ಮುಂದಾಗಿದ್ದರು. ಹೀಗಾಗಿ ಅಲ್ಲಿದ್ದ ಸಾಂಪ್ರದಾಯಿಕ ಮೀನುಗಾರರ ಗುಂಪು, ಇಲ್ಲಿ ಮೀನುಗಾರಿಕೆ ಮಾಡಬಾರದು ಎಂದು ಬುದ್ಧಿ ಹೇಳಿದೆ. ಈ ವಿಷಯವಾಗಿಯೇ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು, ಜಗಳ ವಿಕೋಪಕ್ಕೆ ಹೋಗಿದೆ.
ಇಲ್ಲಿ ಮೀನುಗಾರಿಕೆ ಮಾಡುವುದು ಬೇಡ. ಇದರಿಂದಾಗಿ ನಮಗೆ ಏನೂ ಸಿಗುವುದಿಲ್ಲ ಎಂದು ಹೇಳಿದ್ದ ಪೆಡಾ ಜಲರಿಪೆಟ್ಟ ಎಂಬಲ್ಲಿಯ ಮೀನುಗಾರರ ಮೇಲೆ ಇನ್ನೊಂದು ಗುಂಪು ಹಲ್ಲೆ ಮಾಡಿದೆ. ಈ ಘಟನೆಯಲ್ಲಿ 6 ಜನ ಮೀನುಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ವಿರೋಧಿ ಮೀನುಗಾರರ ಗುಂಪು ದೋಣಿಗೆ ಬೆಂಕಿ ಹಚ್ಚಿದೆ ಎಂದು ತಿಳಿದು ಬಂದಿದೆ.
ಸಮುದ್ರದ ದಡದಲ್ಲಿ ಸಾಂಪ್ರದಾಯಿಕ ದೋಣಿ ಬಳಕೆ ಮಾಡಿಕೊಂಡು ಮೀನುಗಾರಿಕೆ ಕೈಗೊಂಡವರ ಪ್ರದೇಶದಲ್ಲಿ ರಿಂಗ್ ನೆಟ್ ಹಾಗೂ ಬೋಟ್ ಬಳಕೆ ಮಾಡಿ ಮೀನುಗಾರಿಕೆ ಮಾಡುವಂತಿಲ್ಲ. ಅಲ್ಲದೇ, ಹೈಕೋರ್ಟ್ ಕೂಡ ತೀರದಿಂದ 8 ಕಿ.ಮೀ ದೂರ ಹೋಗಿ ರಿಂಗ್ ನೆಟ್ ಬಳಕೆ ಮಾಡಿ ಮೀನುಗಾರಿಕೆ ಮಾಡಬೇಕು ಎಂದು ಹೇಳಿತ್ತು. ಆದರೂ ಈ ನಿಯಮವನ್ನು ಅವರು ಗಾಳಿಗೆ ತೂರಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.