ಅಮೆರಿಕಾದ ಸ್ಯಾಕ್ರಮೆಂಟೋದಲ್ಲಿ ಫೆಬ್ರವರಿ 14 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿನಿ ನೀಲಂ ಶಿಂಧೆ ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಜಾರಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾದ ನೀಲಂ, ಪ್ರತಿನಿತ್ಯ ಸಂಜೆ ವಾಕಿಂಗ್ ಹೋಗುವ ಮಾರ್ಗದಲ್ಲೇ ಈ ದುರ್ಘಟನೆ ಸಂಭವಿಸಿದೆ. ಹಿಂಬದಿಯಿಂದ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ.
ತನ್ನ ಮಗಳ ಸ್ಥಿತಿ ಅರಿತು ಆಕೆಯ ತಂದೆ ಆನಂದ್ ಶಿಂಧೆ ಅಮೆರಿಕಾಗೆ ತೆರಳಲು ತುರ್ತು ವೀಸಾಕ್ಕಾಗಿ ಮುಂಬೈ ವೀಸಾ ಕಚೇರಿಗೆ ತೆರಳಿದ್ದಾರೆ. ಆದರೆ, ವೀಸಾ ಕಚೇರಿಯ ಅಧಿಕಾರಿಗಳು ಅವರ ಮನವಿಗೆ ಸ್ಪಂದಿಸದೆ, ಕಚೇರಿಯಿಂದ ಹೊರಹೋಗುವಂತೆ ಸೂಚಿಸಿದ್ದಾರೆ. ತಂದೆ ಆನಂದ್ ಶಿಂಧೆ ತಮ್ಮ ಮಗಳನ್ನು ನೋಡಲು ಅಮೆರಿಕಾಕ್ಕೆ ತೆರಳಲು ವೀಸಾಕ್ಕಾಗಿ ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಈ ಮಧ್ಯೆ, ಕೇಂದ್ರ ಸರ್ಕಾರವು ಶಿಂಧೆ ಕುಟುಂಬಕ್ಕೆ ತುರ್ತು ವೀಸಾ ಒದಗಿಸಲು ಅಮೆರಿಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.
ನೀಲಂ ಅವರ ಸಹೋದರ ಗೌರವ್ ಕದಂ ಅವರು, ಅಪಘಾತದ ಬಗ್ಗೆ ಮಾಹಿತಿ ನೀಡುತ್ತಾ, ಘಟನೆ ನಡೆದ ಎರಡು ದಿನಗಳ ನಂತರ ನೀಲಂ ಅವರ ರೂಮ್‌ಮೇಟ್‌ನಿಂದ ಮಾಹಿತಿ ಸಿಕ್ಕಿತು ಎಂದು ತಿಳಿಸಿದರು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಸ್ಪತ್ರೆಯು ತಕ್ಷಣ ಅಮೆರಿಕಾಗೆ ಬರುವಂತೆ ಕುಟುಂಬಕ್ಕೆ ಇ-ಮೇಲ್ ಕಳುಹಿಸಿದೆ.
ನೀಲಂ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುಟುಂಬವು ತುರ್ತು ವೀಸಾಕ್ಕಾಗಿ ಪಾಸ್‌ಪೋರ್ಟ್ ಕಚೇರಿಗೆ ಮತ್ತು ಕೇಂದ್ರ ಸಚಿವ ಮುರಳೀಧರ್ ಮೋಹೋಲ್, ಮಾಜಿ ಸಂಸದ ಶ್ರೀನಿವಾಸ್ ಪಾಟೀಲ್ ಮತ್ತು ಮಾಜಿ ಶಾಸಕ ಬಾಲಾಸಾಹೇಬ್ ಪಾಟೀಲ್ ಅವರನ್ನು ಸಂಪರ್ಕಿಸಿತ್ತು. ಆದರೆ, ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ಸರ್ಕಾರದಿಂದ ಸಿಗಬೇಕಾದ ಸಹಾಯದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Maharashtra woman battles for life in US after road accident, family seeks visa. Centre requests for emergency US visa. Watch this report #US #Student #Maharashtra #ITVideo @akshita_N @geeta_mohan pic.twitter.com/QcrLCp2MJX
— IndiaToday (@IndiaToday) February 27, 2025