ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್ ಗಳ ಫಾರ್ಮ್ಯಾಟ್ ನ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂಬ ವರದಿಯನ್ನು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿರಸ್ಕರಿಸಿದ್ದಾರೆ.
ವಿರಾಟ್ ಕೊಹ್ಲಿ ಸದ್ಯದಲ್ಲೇ ಟೀಂ ಇಂಡಿಯಾದ ಏಕದಿನ ಮತ್ತು ಟಿ-20 ಕ್ರಿಕೆಟ್ನ ನಾಯಕತ್ವ ತ್ಯಜಿಸಲಿದ್ದಾರಂತೆ. ಯುಎಇ ಹಾಗೂ ಒಮಾನ್ ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಮುಗಿದ ಬೆನ್ನಲೇ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯಲಿದ್ದಾರಂತೆ. ನೂತನ ನಾಯಕನಾಗಿ ಏಕದಿನ ಮತ್ತು ಟಿ-20 ಕ್ರಿಕೆಟ್ಗೆ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಮಾಡಲಿದೆ ಎಂಬೆಲ್ಲಾ ವರದಿಗಳು ಹರಿದಾಡುತ್ತಿವೆ.
“ಇವೆಲ್ಲಾ ಕೇವಲ ವದಂತಿ ಅಷ್ಟೇ. ಈ ತರಹದ್ದು ಏನೂ ಆಗಿಲ್ಲ. ವಿರಾಟ್ (ಎಲ್ಲಾ ಸ್ವರೂಪಗಳ ) ನಾಯಕನಾಗಿ ಉಳಿಯುತ್ತಾರೆ” ಎಂದು ಧುಮಾಲ್ ಸ್ಪಷ್ಟಪಡಿಸಿದ್ದಾರೆ.
ಈ ಮೊದಲು, ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಸೀಮಿತ ಓವರ್ ಗಳ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಶರ್ಮಾ ಮೇಲೆ ಬೀಳಬಹುದು ಎಂದು ಹೇಳಲಾಗಿತ್ತು.
ವಿರಾಟ್ ಕೊಹ್ಲಿ ಅವರ ನಾಯಕತ್ವದ ಕುರಿತು ಬಿಸಿಸಿಐ ಈಗಾಗಲೇ ವಿಶೇಷ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದೆ. ಕಳೆದ ಜುಲೈನಲ್ಲಿ ಬಿಸಿಸಿಐ ಅಧಿಕಾರಿಗಳು ವಿಶೇಷ ಸಭೆ ನಡೆಸಿದ್ದಾರಂತೆ ಅಂತೆಲ್ಲಾ ವರದಿಯಾಗಿತ್ತು. ಆದರೆ, ‘ಇಂತಹ ಯಾವುದೇ ಸಭೆ ನಡೆದಿಲ್ಲ’ ಎಂದು ಧುಮಾಲ್ ಸ್ಪಷ್ಟಪಡಿಸಿದ್ದಾರೆ.