ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ. ಟಿ-20 ವಿಶ್ವಕಪ್ ನಂತ್ರ ಅವರು, ನಾಯಕತ್ವ ತ್ಯಜಿಸಲಿದ್ದಾರೆ. ಕೊಹ್ಲಿ ನಂತ್ರ ಯಾರಿಗೆ ನಾಯಕನ ಪಟ್ಟ ಎಂಬ ಬಗ್ಗೆ ಚರ್ಚೆಯಾಗ್ತಿದೆ. ರೋಹಿತ್ ಶರ್ಮಾ, ನಾಯಕರಾಗುವುದು ಬಹುತೇಕ ಖಚಿತವಾಗಿದೆ.
ಕೊಹ್ಲಿ, ಟಿ-20 ಜೊತೆ ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಯುವ ಸಾಧ್ಯತೆಯಿದೆ. ಕೊಹ್ಲಿ ನಂತ್ರ ರೋಹಿತ್ ಶರ್ಮಾ, ನಾಯಕ ಸ್ಥಾನಕ್ಕೇರಿದ್ರೆ ಇದು ಕೊಹ್ಲಿ ವೃತ್ತಿ ಜೀವನದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಕೊಹ್ಲಿ ಸದ್ಯ ಟಿ-20, ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ಅವರ ನಾಯಕತ್ವ, ಕೆಲ ಆಟಗಾರರ ಕ್ರಿಕೆಟ್ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ರವಿಚಂದ್ರನ್ ಅಶ್ವಿನ್ ಸೇರಿದಂತೆ ಕೆಲವು ಭಾರತೀಯ ಕ್ರಿಕೆಟಿಗರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ.
ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಯಶಸ್ವಿ ಆಟಗಾರರಾಗಿದ್ದರು. 2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ ವಿಶ್ವಕಪ್ ವಿಜೇತ ತಂಡದ ಆಟಗಾರರಾಗಿದ್ದ ಯುವರಾಜ್ ಸಿಂಗ್, ಕೊಹ್ಲಿ ನಾಯಕತ್ವದಲ್ಲಿ ಫಾರ್ಮ್ ಉಳಿಸಿಕೊಳ್ಳಲಿಲ್ಲ. 2019ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ಧೋನಿಯ ನಾಯಕತ್ವದಲ್ಲಿ ಯಶಸ್ವಿಯಾದ ಇನ್ನೊಬ್ಬ ಎಡಗೈ ಆಟಗಾರ ಸುರೇಶ್ ರೈನಾ. ಕೊಹ್ಲಿ, ನಾಯಕರಾದ್ಮೇಲೆ ಸುರೇಶ್ ರೈನಾ ಫಾರ್ಮ್ ಕಳೆದುಕೊಂಡಿದ್ದರು. ಕೊಹ್ಲಿ ನಾಯಕತ್ವದಲ್ಲಿ ಕೇವಲ 26 ಏಕದಿನ ಪಂದ್ಯಗಳನ್ನು ಆಡಿದ ರೈನಾ, 542 ರನ್ ಗಳಿಸಿದ್ದರು.
ಕೊಹ್ಲಿ ನಾಯಕರಾದ್ಮೇಲೆ ಅವಕಾಶ ವಂಚಿತರಾದವರಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಒಬ್ಬರು. ಕೊಹ್ಲಿ ನಾಯಕತ್ವದ ನಂತ್ರ, ಅಶ್ವಿನ್ ಟಿ-20 ಹಾಗೂ ಏಕದಿನ ಕ್ರಿಕೆಟ್ ವೃತ್ತಿ ಜೀವನದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕೊಹ್ಲಿ ನಾಯಕತ್ವದಲ್ಲಿ ಅಶ್ವಿನ್ ಕೇವಲ 20 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 25 ವಿಕೆಟ್ ಪಡೆದಿದ್ದಾರೆ.