ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ಪಬ್ ಮೇಲೆ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಪಬ್ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಅಲ್ಲದೇ ಚರ್ಚ್ ಸ್ಟ್ರೀಟ್ ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರೋಡ್ ನಲ್ಲಿರುವ ಪಾಂಜಿಯೋ ಬಾರ್ ಆಂಡ್ ರೆಸ್ಟೋರೆಂಟ್ ಮೇಲೂ ಪ್ರಕರಣ ದಾಖಲಾಗಿದೆ.
ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರ ನಿಗದಿ ಪಡಿಸಿದ ನಿಯಮಗಳನ್ನು ಗಾಳಿಗೆ ತೂರಿ ತಡರಾತ್ರಿವರೆಗೂ ಪಬ್ ತೆರೆದು ಪಾರ್ಟಿಗಳಿಗೆ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿರುವ ಪಬ್, ರೆಸ್ಟೋರೆಂಟ್, ಬಾರ್ ಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜುಲೈ 6ರಂದು ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಒನ್ 8 ಕಮ್ಯೂನ್, ಎಂಪೈರ್ ರೆಸ್ಟೋರೆಂಟ್, ಪಂಜಿಯೋ ಬಾರ್ ಆಂಡ್ ರೆಸ್ಟೋರೆಂಟ್ ಮಧ್ಯರತರಿ 1:20ವರೆಗೂ ತೆರೆದಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪಬ್, ರೆಸ್ಟೋರೆಟ್ ಗಳ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.