ಟೀಂ ಇಂಡಿಯಾದ ಆಟಗಾರರು ಕ್ರಿಕೆಟ್, ದುಬಾರಿ ಕಾರು, ಸ್ಟೈಲಿಶ್ ಬಟ್ಟೆಯಿಂದ ಮಾತ್ರವಲ್ಲ ಇನ್ನೂ ಅನೇಕ ಕಾರಣಗಳಿಗೆ ಎಲ್ಲರ ಗಮನ ಸೆಳೆಯುತ್ತಾರೆ. ಅದ್ರಲ್ಲಿ ಸಾಕು ಪ್ರಾಣಿಗಳೂ ಸೇರಿವೆ.
ಕ್ರಿಕೆಟ್ ಕಾರಣಕ್ಕೆ ವರ್ಷದ ಬಹುತೇಕ ದಿನ ಮನೆಯಿಂದ ಹೊರಗೆ ಇರುವ ಅವರು ಮನೆಗೆ ಬಂದಾಗ ಹೆಚ್ಚು ಸಮಯ ಕಳೆಯುವುದು ಸಾಕು ಪ್ರಾಣಿಗಳ ಜೊತೆ. ಅವರ ನೆಚ್ಚಿನ ಸಾಕು ಪ್ರಾಣಿಗಳು ಮನಸ್ಸಿಗೆ ರಿಲ್ಯಾಕ್ಸ್ ನೀಡಿ ಒತ್ತಡವನ್ನು ಕಡಿಮೆ ಮಾಡುತ್ತವೆ. ಯಾವ ಯಾವ ಆಟಗಾರರು ಯಾವ ಯಾವ ಪ್ರಾಣಿಗಳನ್ನು ಸಾಕಿದ್ದಾರೆ ಎಂಬ ವಿವರ ಇಲ್ಲಿದೆ.
ವಿರಾಟ್ ಕೊಹ್ಲಿ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೈದಾನದಲ್ಲಿ ಎಷ್ಟೇ ಅಬ್ಬರಿಸಲಿ, ಮನೆಯಲ್ಲಿ ಅವರನ್ನು ಶಾಂತಗೊಳಿಸುವುದು ನೆಚ್ಚಿನ ಸಾಕು ಪ್ರಾಣಿ ಬ್ರೂನೋ. ವಿರಾಟ್ ಹಾಗೂ ಅನುಷ್ಕಾ ನಾಯಿಯನ್ನು ಸಾಕಿದ್ದು ಅದಕ್ಕೆ ಬ್ರೂನೋ ಎಂದು ಹೆಸರಿಟ್ಟಿದ್ದಾರೆ.
ಮಹೇಂದ್ರ ಸಿಂಗ್ ಧೋನಿ : ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಾಣಿ ಪ್ರೇಮಿ. ಅವರ ಮನೆಯಲ್ಲಿ ಅನೇಕ ಪ್ರಾಣಿಗಳಿವೆ. ಧೋನಿ ಮನೆಯಲ್ಲಿ ಮೂರು ನಾಯಿಗಳಿವೆ. ಜರ್ಮನ್ ಶೆಫರ್ಡ್ ‘ಸಾರಾ’, ಲ್ಯಾಬ್ರಡಾರ್ ‘ಜಾರಾ’ ಮತ್ತು ‘ಜೋಯಾ’ ಧೋನಿ ಮನೆಯಲ್ಲಿವೆ. ಧೋನಿ, ಧೋನಿ ಮಗಳು ಝೀವಾ ಇವುಗಳ ಜೊತೆ ಆಡ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ನೋಡ್ಬಹುದು.
ರವೀಂದ್ರ ಜಡೇಜಾ : ಭಾರತದ ಸ್ಟಾರ್ ಆಟಗಾರರಲ್ಲಿ ಒಬ್ಬರಾದ ರವೀಂದ್ರ ಜಡೇಜಾ ತಮ್ಮ ಬಿರುಸಿನ ಬ್ಯಾಟಿಂಗ್ ಮತ್ತು ಕಿಲ್ಲರ್ ಬೌಲಿಂಗ್‌ಗೆ ಹೆಸರು ವಾಸಿಯಾಗಿದ್ದಾರೆ. ರವೀಂದ್ರ ಜಡೇಜಾ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ಇವರು 2 ಕುದುರೆಗಳನ್ನು ಸಾಕಿದ್ದಾರೆ. ಒಂದಕ್ಕೆ ‘ವೀರ್’ ಮತ್ತೊಂದಕ್ಕೆ ‘ಗಂಗಾ’ ಎಂದು ಹೆಸರಿಟ್ಟಿದ್ದಾರೆ.
ಕೆಎಲ್ ರಾಹುಲ್ : ಕೆ.ಎಲ್. ರಾಹುಲ್ ಕೂಡ ನಾಯಿ ಪ್ರೇಮಿ. ಅವರ ಮನೆಯಲ್ಲಿರುವ ನಾಯಿಗೆ ಸಿಂಬಾ ಎಂದು ಹೆಸರಿಟ್ಟಿದ್ದಾರೆ. ರಾಹುಲ್ ಕೂಡ ನಾಯಿ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿರುತ್ತಾರೆ.