ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಭಾರತೀಯ ಅಭಿಮಾನಿಗಳಿಗೆ ಎರಡು ಆಘಾತ ನೀಡಿದ್ದಾರೆ. ಕೊಹ್ಲಿ, ಕಳೆದ ವಾರ ನಡೆದ ಮೊದಲ ಟಿ 20 ವಿಶ್ವಕಪ್ ನಂತರ ಭಾರತದ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಅದರ ನಂತರ ಕೊಹ್ಲಿ, ಐಪಿಎಲ್ 2021 ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದರು.
ಕೊಹ್ಲಿ, 2016 ರಿಂದ ಟೆಸ್ಟ್, ಏಕದಿನ, ಟಿ 20 ಅಂತಾರಾಷ್ಟ್ರೀಯ ಮತ್ತು ಆರ್‌ಸಿಬಿಯಲ್ಲಿ ಭಾರತ ತಂಡದ ನಾಯಕರಾಗಿದ್ದಾರೆ. ಭಾರತ ತಂಡದ ನಾಯಕರಾದ್ಮೇಲೆ ಕೊಹ್ಲಿ ಒಂದೇ ಒಂದು ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಆರ್‌ಸಿಬಿ ಕೂಡ ಒಂದೇ ಒಂದು ಬಾರಿ ಪ್ರಶಸ್ತಿ ಗೆದ್ದಿಲ್ಲ. ನಾಯಕನಾಗಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರೂ, ಟಿ 20 ಕ್ರಿಕೆಟ್ ನಲ್ಲಿ ಅವರ ಪ್ರದರ್ಶನ ಕ್ಷೀಣಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 70 ಶತಕಗಳನ್ನು ಗಳಿಸಿರುವ ಕೊಹ್ಲಿ, 2019 ರ ನವೆಂಬರ್ ನಂತರ ಶತಕ ಗಳಿಸಿಲ್ಲ. ಕೊಹ್ಲಿ ನವೆಂಬರ್ 5 ರಂದು 33 ನೇ ವರ್ಷಕ್ಕೆ ಕಾಲಿಡುತ್ತಾರೆ. ಅವರು ಫಿಟ್ ಆಗಿದ್ದು, ಇನ್ನೂ 4-5 ವರ್ಷಗಳ ಕಾಲ ಕ್ರಿಕೆಟ್ ಆಡಲು ಸದೃಢರಾಗಿದ್ದಾರೆ. ಇನ್ನೂ ಕೆಲ ವರ್ಷ ಕ್ರಿಕೆಟ್ ಆಡುವ ಪ್ಲಾನ್ ನಲ್ಲಿರುವ ಕೊಹ್ಲಿ, ವೃತ್ತಿ ಜೀವನದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಅವರ ವೃತ್ತಿ ಜೀವನದ ಕೊನೆಯ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿದ್ದರು. ಕೊಹ್ಲಿ ಕೂಡ ಯಾವುದೇ ಒಂದು ಸ್ವರೂಪದ ಕ್ರಿಕೆಟ್ ಆಯ್ದುಕೊಳ್ಳುವ ಸಾಧ್ಯತೆಯಿದೆ.
ಟಿ 20 ತಂಡದ ನಾಯಕತ್ವವನ್ನು ತೊರೆದ ನಂತರ ವಿರಾಟ್, ಟಿ-20 ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆಯಿದೆ. ಟಿ 20 ವಿಶ್ವಕಪ್ ನಂತರ ಭಾರತ ತಂಡ 14 ಟಿ-20, 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ.
ವಿರಾಟ್ ಕೊಹ್ಲಿ, ಐಪಿಎಲ್ ಮುಂದುವರೆಸಲಿದ್ದಾರೆ. ಆದರೆ ಟಿ 20 ಅಂತರಾಷ್ಟ್ರೀಯ ಪಂದ್ಯಗಳಿಂದ ಹಿಂದೆ ಸರಿಯಬಹುದು ಎನ್ನಲಾಗಿದೆ.
ವಿರಾಟ್ ಕೊಹ್ಲಿ ಈಗಾಗಲೇ ಟೀಮ್ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಮತ್ತು ಕೆಲಸದ ಹೊರೆ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಆಟಗಾರರು ಮೈದಾನಕ್ಕೆ ಬರುವ ಮೊದಲು ಬಯೋ-ಬಬಲ್‌ನಲ್ಲಿರಬೇಕು. ಇದರ ಪರಿಣಾಮ ಆಟಗಾರರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಕೊಹ್ಲಿ, ಟಿ-20 ಹೊರೆ ಇಳಿಸಲು ಮುಂದಾಗಿದ್ದಾರೆ.
ಟಿ 20 ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಟಿ 20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ.