ನವದೆಹಲಿ : ಭಾರತೀಯ ಏಕದಿನ ಕ್ರಿಕೆಟ್ ನ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಹೀಗಾಗಿ ಕೊಹ್ಲಿ ಇನ್ನು ಮುಂದೆ ಟೆಸ್ಟ್ ತಂಡ ಮಾತ್ರ ಮುನ್ನಡೆಸಲಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಅವರಿಗೆ ಏಕದಿನ ತಂಡದ ನಾಯಕತ್ವದಿಂದ ಕೊಕ್ ನೀಡಿದ್ದಕ್ಕೆ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ಬಿಸಿಸಿಐ, ಕೊಹ್ಲಿಗೆ ಕೊಕ್ ನೀಡಿದ್ದರೂ ಅಂಕಿ- ಅಂಶಗಳ ಪ್ರಕಾರ ಕೊಹ್ಲಿ ಶ್ರೇಷ್ಠ ನಾಯಕರಾಗಿಯೇ ಹೊರ ಹೊಮ್ಮಿದ್ದಾರೆ. ಸಹಜವಾಗಿ ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಏಕದಿನ ತಂಡದ ನಾಯಕರುಗಳ ಪಟ್ಟಿಯಲ್ಲಿ ವಿರಾಟ್, ಧೋನಿ, ಅಜರ್, ಗಂಗೂಲಿ ಅವರ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತವೆ.
ಈ ನಾಲ್ಕೂ ಜನರ ನಾಯಕತ್ವದಲ್ಲಿನ ಗೆಲುವುಗಳ ಲೆಕ್ಕಾಚಾರ ನೋಡುವುದಾದರೆ ಕೊಹ್ಲಿ ನೇತೃತ್ವದಲ್ಲಿನ ಭಾರತದ ಸಾಧನೆ ಮುಂದೆ ಇದೆ. 2017ರಿಂದ ಏಕದಿನ ತಂಡದ ನಾಯಕತ್ವ ವಹಿಸಿರುವ ಕೊಹ್ಲಿ ಇಲ್ಲಿಯವರೆಗೂ 95 ಪಂದ್ಯಗಳಲ್ಲಿ ತಂಡದ ನೇತೃತ್ವ ವಹಿಸಿದ್ದಾರೆ. ಈ ಪೈಕಿ ಕೇವಲ 27 ಪಂದ್ಯಗಳಲ್ಲಿ ಭಾರತ ತಂಡ ಸೋಲು ಕಂಡು, 65 ರಲ್ಲಿ ಗೆಲುವು ಸಾಧಿಸಿದೆ.
ಎಂ.ಎಸ್. ಧೋನಿ 200 ಪಂದ್ಯಗಳಲ್ಲಿ ತಂಡ ಮುನ್ನಡೆಸಿ 110 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸೌರವ್ ಗಂಗೂಲಿ 146 ಪಂದ್ಯಗಳಲ್ಲಿ ನಾಯಕತ್ವ ವಹಿಸಿ, 76 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಮೊಹಮ್ಮದ್ ಅಜರುದ್ದೀನ್ 174 ಪಂದ್ಯಗಳಲ್ಲಿ ನಾಯಕರಾಗಿ 90 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ತಂಡ ಗೆದ್ದಿರುವ ಕುರಿತು ಸರಾಸರಿ ನೋಡುವುದಾದರೆ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಶೇ.70.43ರಷ್ಟು ಜಯ ಸಾಧಿಸಿದೆ.
ಧೋನಿ ಸಮಯದಲ್ಲಿ ಶೇ.59.52, ಅಜರುದ್ಧೀನ್ ಸಮಯದಲ್ಲಿ ಶೇ. 54.16, ಸೌರವ್ ಗಂಗೂಲಿ ಸಮಯದಲ್ಲಿ ಶೇ. 53.90ರಷ್ಟು ಜಯ ಸಾಧಿಸಿದೆ. ಇವುಗಳನ್ನೆಲ್ಲ ನೋಡುವುದಾದರೆ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಕೊಹ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ, ಐಸಿಸಿ ಟ್ರೋಫಿ ಗೆಲ್ಲಲು ಕೊಹ್ಲಿ ಸಮಯದಲ್ಲಿ ಆಗಲಿಲ್ಲ ಎಂಬ ಒಂದೇ ನೋವು ಕೊಹ್ಲಿ ಕೊಕ್ ಗೆ ಕಾರಣ ಇರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.