ಭಾರತೀ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸದೇ ಬಹಳ ದಿನಗಳಾದ ವಿಚಾರವಾಗಿ ಇತ್ತೀಚೆಗೆ ಬಹಳ ಟೀಕೆಗೆ ಗುರಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಎರಡನೇ ಟೆಸ್ಟ್ ಪಂದ್ಯವನ್ನು ಗಾಯದ ಸಮಸ್ಯೆಯಿಂದ ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ಮೈದಾನಕ್ಕೆ ಇಳಿಯಲಿದ್ದಾರೆ. ದ್ವಿತೀಯ ಟೆಸ್ಟ್‌ನಲ್ಲಿ ಅತ್ಯುತ್ತಮ ಆಟವಾಡಿ 60 ರನ್‌ಗಳಿಸಿದ ಹನುಮ ವಿಹಾರಿ ಕೊಹ್ಲಿಗೆ ಸ್ಥಾನ ಬಿಟ್ಟುಕೊಡಬೇಕಾಗಿದೆ. ತಂಡದಲ್ಲಿ ತಮ್ಮ ಸ್ಥಾನದ ಮೇಲೆ ತೂಗುಗತ್ತಿ ತಂದುಕೊಂಡಿರುವ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರಾ ದ್ವಿತೀಯ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ತಲಾ ಅರ್ಧ ಶತಕ ಗಳಿಸುವ ಮೂಲಕ ಕಡೇ ಪಕ್ಷ ಪ್ರವಾಸದ ಮೂರನೇ ಟೆಸ್ಟ್‌ಗಾದರೂ ತಂಡದಲ್ಲಿ ಉಳಿದುಕೊಂಡಿದ್ದಾರೆ.
ಟೀಂ ಇಂಡಿಯಾ ರೆಟ್ರೋ ಜೆರ್ಸಿಯಲ್ಲಿ ಧೋನಿ ಮಿಂಚಿಂಗ್
ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಹಾಗೂ ಸಂಭವನೀಯ ಬದಲಾವಣೆಗಳ ಕುರಿತು ಮಾತನಾಡಿದ ಕೊಹ್ಲಿ, “ಬದಲಾವಣೆಗಳು ಆಗುತ್ತವೆ, ಆದರೆ ಅವುಗಳನ್ನು ಬಲವಂತದಿಂದ ಮಾಡಲು ಸಾಧ್ಯವಿಲ್ಲ. ಈ ಬದಲಾವಣೆ ಕುರಿತು ನಾವು ಯಾವಾಗ ಮಾತನಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಲಾರೆ. ಕಡೆಯ ಟೆಸ್ಟ್‌ನತ್ತ ನೀವೊಮ್ಮೆ ನೋಡಿದರೆ, ಅಜಿಂಕ್ಯಾ ಮತ್ತು ಪೂಜಾರಾ ಇಬ್ಬರೂ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಿದ ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅದರಲ್ಲೂ ಹಿಂದೆಲ್ಲಾ ಚೆನ್ನಾಗಿ ಆಡಿರುವ ಇವರಿಬ್ಬರು ಇಂಥ ಸರಣಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಮುಂದೆ ಬರುತ್ತಾರೆ. ನಾವು ಆಸ್ಟ್ರೇಲಿಯಾದಲ್ಲೂ ಇದನ್ನು ನೋಡಿದ್ದೇವೆ, ಕಡೆಯ ಬಾರಿ ಅಲ್ಲಿದ್ದಾಗ (2020-21), ಈಗಲೂ ಸಹ ನಾವು ಅದನ್ನು ನೋಡುತ್ತಿದ್ದೇವೆ. ನಿರ್ಣಾಯಕ ಪರಿಸ್ಥಿತಿಗಳಲ್ಲಿ ನಿರ್ಣಾಯಕ ಆಟಗಳಿಗೆ ಬಹಳ ಮೌಲ್ಯವಿರುತ್ತದೆ,” ಎಂದಿದ್ದಾರೆ.
ಇನ್ನು ತಮ್ಮ ಫಾರಂ ಕುರಿತು ಮಾತನಾಡಿ ಕೊಹ್ಲಿ, “ಇದು ಮೊದಲ ಬಾರಿಯಲ್ಲ. ನನ್ನ ವೃತ್ತಿಯಲ್ಲಿ ಹೀಗೆ ಕೆಲವೊಮ್ಮೆ ಆಗಿದೆ — 2014ರಲ್ಲಿ ಇಂಗ್ಲೆಂಡ್‌ನಲ್ಲಿ ಆಗಿದ್ದು ಇದರಲ್ಲಿ ಒಂದು. ಆದರೆ ಹೊರಜಗತ್ತು ನನ್ನತ್ತ ನೋಡುವಂತೆ ನಾನು ನನ್ನನ್ನು ನೋಡಿಕೊಳ್ಳುವುದಿಲ್ಲ ಮತ್ತು ಇಂದು ಮಾತನಾಡಲಾಗುತ್ತಿರುವ ನನ್ನದೇ ಮಟ್ಟವನ್ನು ನಾನೇ ಸೃಷ್ಟಿಸಿರುವಂಥದ್ದಾಗಿದೆ. ತಂಡಕ್ಕೆ ನನ್ನಿಂದ ಸಾಧ್ಯವಾದಷ್ಟು ಮಟ್ಟದಲ್ಲಿ ಅತ್ಯುತ್ತಮ ಆಟ ಆಡುವುದು ನನಗೆ ಹೆಮ್ಮೆಯ ವಿಚಾರ.
ಕ್ರೀಡೆಯಲ್ಲಿ ಕೆಲವೊಮ್ಮೆ ನಿಮಗೆ ಬೇಕಾದ ಹಾಗೆ ವಿಚಾರಗಳು ನಡೆಯುವುದಿಲ್ಲ. ಆದರೆ ಒಬ್ಬ ಆಟಗಾರನಾಗಿ, ಕಳೆದ ಕ್ಯಾಲೆಂಡರ್ ವರ್ಷದಿಂದ ಒಬ್ಬ ಬ್ಯಾಟ್ಸ್‌ಮನ್ ಆಗಿ ನಾನು ತಂಡಕ್ಕಾಗಿ ಕೆಲವೊಂದು ಮುಖ್ಯವಾದ ಕ್ಷಣಗಳಲ್ಲಿ ಭಾಗಿಯಾಗಿದ್ದೇನೆ. ತಂಡಕ್ಕೆ ಅಗತ್ಯವಾದಾಗ ಕೆಲವೊಂದು ಮುಖ್ಯವಾದ ಪಾಲುದಾರಿಕೆಗಳಲ್ಲಿ ಭಾಗಿಯಾಗಿದ್ದೇನೆ, ಇಂಥ ಕ್ಷಣಗಳು ಟೆಸ್ಟ್ ಪಂದ್ಯಗಳಲ್ಲು ಬಹಳ ನಿರ್ಣಾಯಕವಾಗಿವೆ, ಹಾಗಾಗಿ ನನಗೆ ಇದು ಹೆಮ್ಮೆ ಪಡಬೇಕಾದ ವಿಚಾರ. ನಾನಿರುವ ಜಾಗದಲ್ಲಿ ನೀವು ಇದ್ದಿದ್ದರೆ, ನಿಮ್ಮನ್ನು ಸದಾ ಟೀಕಿಸುತ್ತಿದ್ದರೆ, ಅದು ಹೊರಜಗತ್ತಿನ ಕೆಲಸ. ನಾನು ನನ್ನತ್ತ ಹಾಗೆ ನೋಡಿಕೊಳ್ಳುವುದಿಲ್ಲ,” ಎಂದಿದ್ದಾರೆ ಕೊಹ್ಲಿ.
ಎರಡನೇ ಟೆಸ್ಟ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಆತುರದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡು ಭಾರೀ ಟೀಕೆಗೆ ಗ್ರಾಸವಾಗಿರುವ ರಿಶಭ್ ಪಂತ್ ಕುರಿತು ಮಾತನಾಡಿದ ಕೊಹ್ಲಿ, “ಒಬ್ಬ ಬ್ಯಾಟ್ಸ್‌ಮನ್ ಒಂದು ಶಾಟ್ ಆಡಲು ಹೋಗಿ ಔಟಾದಾಗ, ಆತನಿಗೆ ಆ ಪರಿಸ್ಥಿತಿಯಲ್ಲಿ ಆ ಶಾಟ್ ಬೇಕಿತ್ತೇ ಬೇಡವೇ ಎಂದು ಗೊತ್ತಿರುತ್ತದೆ. ಪ್ರತಿಯೊಬ್ಬರೂ ಸಹ ತಮ್ಮ ಹೊಣೆಗಾರಿಕೆ ಅರಿತು ಮುಂದೆ ಸಾಗಬೇಕು. ನಾವೆಲ್ಲ ನಮ್ಮ ವೃತ್ತಿ ಜೀವನದಲ್ಲಿ ತಪ್ಪುಗಳನ್ನು ಮಾಡಿದ್ದೇವೆ. ನಮ್ಮ ತಪ್ಪುಗಳಿಂದಾಗಿ ಅಥವಾ ಒತ್ತಡದಿಂದಾಗಿ ಅಥವಾ ಬೌಲರ್‌ನ ಕೌಶಲ್ಯದಿಂದಾಗಿ ಬಹಳ ಮುಖ್ಯವಾದ ಸಂದರ್ಭದಲ್ಲಿ ವಿಕೆಟ್ ಕಳೆದುಕೊಂಡಿದ್ದೇವೆ. ಹಾಗಾಗಿ ಆಯಾ ಸಂದರ್ಭದ ಮನಸ್ಥಿತಿಯನ್ನು ಅರಿಯುವುದು ಮುಖ್ಯ,’’ ಎಂದಿದ್ದಾರೆ.