ಕ್ರಿಕೆಟರ್ಗಳಿಗೆ ಕಾರು, ಬೈಕ್ಗಳ ಕ್ರೇಝ್ ಹೊಸದೇನಲ್ಲ. ವಿರಾಟ್ ಕೊಹ್ಲಿ ಕೂಡ ಕಾರು ಪ್ರಿಯರಲ್ಲೊಬ್ಬರು. ಅವರ ಬಳಿ ಸಾಕಷ್ಟು ಐಷಾರಾಮಿ ಕಾರುಗಳ ಸಂಗ್ರಹವೇ ಇದೆ. ಕೊಹ್ಲಿ, ಭಾರತದಲ್ಲಿ ಆಡಿ ಕಂಪನಿಯ ಬ್ರಾಂಡ್ ಅಂಬಾಸಿಡರ್ ಕೂಡ. ಹಾಗಾಗಿ ಅವರ ಬಳಿ ಅತ್ಯುತ್ತಮ ಆಡಿ ಕಾರುಗಳೂ ಇವೆ. ವಿರಾಟ್ ಕೊಹ್ಲಿ ಖರೀದಿಸಿದ ಮೊದಲ ಕಾರು ಯಾವುದು ಗೊತ್ತಾ? ಸಂದರ್ಶನವೊಂದರಲ್ಲಿ ಈ ಸಂಗತಿಯನ್ನು ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಕೊಹ್ಲಿ ಖರೀದಿಸಿದ ಮೊದಲ ಕಾರು ಟಾಟಾ ಸಫಾರಿ. ಆ ಸಮಯದಲ್ಲಿ ಟಾಟಾ ಸಫಾರಿ ಐಷಾರಾಮಿ ಕಾರುಗಳಲ್ಲಿ ಒಂದು ಎನಿಸಿಕೊಂಡಿತ್ತು. ವಿರಾಟ್ ಕೊಹ್ಲಿ ತಮ್ಮ ಮೊದಲ ಕಾರಿಗೆ ಸಂಬಂಧಿಸಿದ ತಮಾಷೆಯ ಕಥೆಯನ್ನೂ ಹೇಳಿದ್ದಾರೆ. ಅವರು ಖರೀದಿಸಿದ ಟಾಟಾ ಸಫಾರಿ ಡೀಸೆಲ್ ಎಂಜಿನ್ ಹೊಂದಿತ್ತು. ಈಗಲೂ ಟಾಟಾ ಸಫಾರಿ ಡೀಸೆಲ್ ಎಂಜಿನ್ನಲ್ಲಿ ಮಾತ್ರ ಬರುತ್ತದೆ.
ವಿರಾಟ್ ಕೊಹ್ಲಿ ಸಫಾರಿ ಖರೀದಿಸಿದ ನಂತರ ಸಹೋದರನ ಜೊತೆಗೆ ಲಾಂಗ್ ಡ್ರೈವ್ ಹೊರಟಿದ್ದರು. ಡೀಸೆಲ್ ಹಾಕಿಸಿಕೊಳ್ಳಲು ಟಾಟಾ ಸಫಾರಿ ತೆಗೆದುಕೊಂಡು ಬಂಕ್ಗೆ ಹೋಗಿದ್ದಾರೆ. ಪೆಟ್ರೋಲ್ ತುಂಬಿಸಬೇಕೆ ಅಥವಾ ಡೀಸೆಲ್ ಹಾಕಬೇಕೆ ಎಂಬುದನ್ನು ಕೊಹ್ಲಿ ಸಹೋದರ ಬಂಕ್ ಸಿಬ್ಬಂದಿಗೆ ಹೇಳಿರಲಿಲ್ಲ. ಪೆಟ್ರೋಲ್ ಪಂಪ್ ಸಿಬ್ಬಂದಿ ಡೀಸೆಲ್ ಎಂಜಿನ್ನ ಕಾರಿಗೆ ಪೆಟ್ರೋಲ್ ತುಂಬಿಸಿಬಿಟ್ಟಿದ್ದ.
ಅರ್ಧ ಕಿಲೋಮೀಟರ್ ದೂರ ಹೋಗುವಷ್ಟರಲ್ಲಿ ಕಾರು ನಿಂತೇಬಿಟ್ಟಿತ್ತು. ಕಾರು ಕೆಟ್ಟು ನಿಂತಿದೆ ಎಂದು ಕೊಹ್ಲಿ ಭಾವಿಸಿದ್ದರು. ಆದರೆ ಟ್ಯಾಂಕ್ಗೆ ಡೀಸೆಲ್ ಬದಲು ಪೆಟ್ರೋಲ್ ತುಂಬಿಸಿರೋದು ಬೆಳಕಿಗೆ ಬಂದಿದೆ. ನಂತರ ಟ್ಯಾಂಕ್ ಖಾಲಿ ಮಾಡಿ ಡೀಸೆಲ್ ತುಂಬಿಸಿಕೊಂಡು ಕೊಹ್ಲಿ ಟಾಟಾ ಸಫಾರಿಯನ್ನು ಕೊಂಡೊಯ್ದರಂತೆ. ಈ ಘಟನೆಯನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.