ಆಗ್ರಾ: ಕೋಳಿ ಸಾಗಿಸುತ್ತಿದ್ದ ಲಾರಿಯೊಂದು ದಟ್ಟ ಮಂಜಿನಿಂದಾಗಿ ಅಪಘಾತಕ್ಕೀಡಾಗಿದ್ದು, ಈ ವೇಳೆ ಪುಕ್ಸಟ್ಟೆ ಕೋಳಿಗಾಗಿ ಜನರು ಮುಗಿ ಬಿದ್ದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಆಗ್ರಾದಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ವಾಹನ ಸವಾರರಿಗೆ ರಸ್ತೆಗಳು ಕಾಣದ ಸ್ಥಿತಿ ನಿರ್ಮಾಣವಾಗಿದೆ. ದಟ್ಟ ಮಂಜಿನಿಂದಾಗಿ ಇಂದು ಆಗ್ರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 12 ವಾಹನಗಳು ಸರಣಿ ಅಪಘಾತಕ್ಕೀಡಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಹಲವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಈ ಸರಣಿ ಅಪಘಾತದಲ್ಲಿ ಕೋಳಿ ತುಂಬಿಕೊಂಡು ಸಾಗುತ್ತಿದ್ದ ಟ್ರಕ್ ಕೂಡ ಅಪಘಾತಕ್ಕೀಡಾಗಿದೆ. ಕೋಳಿ ತುಂಬಿದ್ದ ಲಾರಿ ಅಪಘಾತಕ್ಕೀಡಾಗುತ್ತಿದ್ದಂತೆ ನೂರಾರು ಜನರು ಲಕ್ಷಾಂತರ ಮೌಲ್ಯದ ಕೋಳಿಗಳನ್ನು ಹೊತ್ತೊಯ್ಯುವುದರಲ್ಲಿ ನಿರತರಾಗಿದ್ದಾರೆ.
ದಟ್ಟ ಮಂಜಿನಿಂದ ಸಾಲು ಸಾಲು ವಾಹನಗಳು ಅಪಘಾತಕ್ಕೀಡಾಗಿ ಚಾಲಕರು, ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದರೆ, ಜನರು ಮಾತ್ರ ಕೋಳಿಗಳನ್ನು ಗೋಣಿ ಚೀಲ, ದೊಡ್ಡ ದೊಡ್ಡ ಬ್ಯಾಗ್ ಗಳನ್ನು ತಂದು ತುಂಬಿಕೊಂಡು ಪಲಾಯನ ಮಾಡುವುದರಲ್ಲಿ ನಿರತರಾಗಿದ್ದಾರೆ. ಸುನೀಲ್ ಎಂಬುವವರು ಸಾವಿರಾರು ಕೋಳಿಗಳನ್ನು ಟ್ರಕ್ ನಲ್ಲಿ ಸಾಗಿಸುತ್ತಿದ್ದಾಗ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಅಪಘಾತ ಸಂಭವಿಸಿದ್ದು, ಕೋಳಿಗಳನ್ನು ಲೂಟಿ ಮಾಡುತ್ತಿದ್ದ ಜನರನ್ನು ತಡೆಯಲು ಆರಂಭದಲ್ಲಿ ಸುನೀಲ್ ಯತ್ನಿಸಿದ್ದಾರೆ. ಆದರೆ ಜನರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಕಣ್ಮುಂದೆಯೇ ಜನರು ಮುಗಿಬಿದ್ದು ಕೋಳಿಗಳನ್ನು ಹೊತ್ತೊಯ್ಯುತ್ತಿದ್ದರೂ ಏನೂ ಮಾಡಲು ಸಾಧ್ಯವಾಗದೇ ನಿಂತು ನೋಡುವಂತಾಗಿದೆ. ಲಕ್ಷಾಂತರ ಮೌಲ್ಯದ ಕೋಳಿಗಳೊಂದಿಗೆ ಜನರು ಪಲಾಯನ ಮಾಡಿದ್ದಾರೆ.