ನೆಂಟರಿಷ್ಟರ ಮದುವೆ ದಿನ ಹತ್ತಿರ ಬಂತು ಅಂದ್ರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತೆ. ಹೆಣ್ಣಕ್ಕಳಿಗಂತೂ ಸಡಗರ ತುಸು ಹೆಚ್ಚಾಗಿಯೇ ಇರುತ್ತದೆ. ಸೀರೆಗೆ ಯಾವ ಬ್ಲೌಸ್ ಮ್ಯಾಚ್ ಮಾಡೋದು, ಯಾವ ರೀತಿ ಸ್ಟಿಚ್ ಮಾಡೋದು ಅಂತೆಲ್ಲಾ ತಲೆಕೆಡಿಸಿಕೊಂಡಿರುತ್ತಾರೆ.
ಸಾಮಾಜಿಕ ಮಾಧ್ಯಮಗಳಲ್ಲೂ ಹಲವಾರು ಮಂದಿ ಮದುವೆಗೆ ಧರಿಸಿರುವ ಉಡುಪಿನ ಚಿತ್ರಣವನ್ನು ಪೋಸ್ಟ್ ಮಾಡುತ್ತಿರುವುದನ್ನು ನೀವು ನೋಡಿರುತ್ತೀರಿ. ಇದೀಗ ಇಲ್ಲೊಬ್ಬರು ಮಹಿಳೆ ಸೀರೆಗೆ ಧರಿಸಿರುವ ಕುಪ್ಪಸ ಬಹಳ ಟ್ರೆಂಡಿಯಾಗಿದೆ. ಮಹಿಳೆಯೊಬ್ಬರು ತನ್ನ ಸೀರೆಯೊಂದಿಗೆ ಮೆಹಂದಿ ಕುಪ್ಪಸವನ್ನು ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಹಂದಿಯು ತಾತ್ಕಾಲಿಕ ಟ್ಯಾಟೂನಂತಿದ್ದು, ಇದನ್ನು ಸಾಮಾನ್ಯವಾಗಿ ಕೈ ಅಥವಾ ಕಾಲುಗಳ ಮೇಲೆ ಅಲಂಕಾರಿಕ ವಿನ್ಯಾಸಗಳನ್ನು ಬಿಡಿಸಲು ಗೋರಂಟಿ ಸಸ್ಯದ ಪುಡಿಮಾಡಿದ ಒಣ ಎಲೆಗಳಿಂದ ರಚಿಸಲಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಿಳಿ ಸೀರೆ ಉಟ್ಟಿರುವುದನ್ನು ನೋಡಬಹುದು. ನೋಡುವುದಕ್ಕೆ, ಮಹಿಳೆಯು ತನ್ನ ದೇಹವನ್ನು ಡಿಸೈನರ್ ಬ್ಲೌಸ್ನಂತೆ ಕಾಣುವ ಮೆಹೆಂದಿ ವಿನ್ಯಾಸ ಬಿಡಿಸಿದ್ದಾಳೆ ಎಂದು ನೀವು ಅಂದುಕೊಳ್ಳಬಹುದು. ಆದರೆ, ಅಸಲಿಗೆ ಈಕೆ ಬ್ಲೌಸ್ ಧರಿಸಿಲ್ಲ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ತಿಳಿಯಬಹುದು. ಬ್ಲೌಸ್ ರೀತಿಯಾಗಿ ಮೆಹಂದಿಯಲ್ಲಿ ಈಕೆ ಡಿಸೈನ್ ಮಾಡಿದ್ದಾಳೆ.
ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 1.23 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.