ಬೀದಿ ಬದಿಯ ಆಹಾರಗಳನ್ನು ತಿನ್ನಬೇಡಿ ಎಂದು ಎಷ್ಟೇ ಹೇಳಿದರೂ, ಅವುಗಳಿಗಿಂತ ಸವಿ ಬೇರೊಂದಿಲ್ಲ ಎಂದು ಅಂದುಕೊಳ್ಳುವವರೇ ಹೆಚ್ಚು. ಎಷ್ಟು ತಿನ್ನಬೇಡಿ ಎನ್ನುತ್ತಾರೋ, ಅಷ್ಟು ಅದರ ಖರೀದಿ ಭರ್ಜರಿಯಿಂದ ಸಾಗುತ್ತದೆ. ಆದರೆ ಈಗ ಜನರು ಮಾತ್ರವಲ್ಲದೇ ಇದರ ರುಚಿಗೆ ಸಾಕು ನಾಯಿಗಳನ್ನೂ ಮರಳುಮಾಡುತ್ತಿದ್ದಾರೆ. ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ನಾಯಿಗೆ ಗೋಲ್ಗಪ್ಪಾ ತಿನ್ನಿಸುತ್ತಿದ್ದಾಳೆ. ನಾಯಿಯೇನೋ ಖುಷಿ ಖುಷಿಯಾಗಿಯೇ ತಿನ್ನುತ್ತಿದೆ. ಆದರೆ ಇದನ್ನು ನೋಡುತ್ತಿರುವ ನೆಟ್ಟಿಗರು ಮಾತ್ರ ಗರಂ ಆಗಿದ್ದಾರೆ. ಕೆಲವರು ಮಾತ್ರ ಇದನ್ನು ಕ್ಯೂಟ್ ಎಂದಿದ್ದರೆ, ಇನ್ನು ಹಲವರು ತಾನೂ ಕೆಡುವುದಲ್ಲದೇ ನಾಯಿಗಳನ್ನೂ ಈಕೆ ಕೆಡಿಸುತ್ತಿದ್ದಾಳೆ ಎಂದು ಬೈಯ್ದು ಕಮೆಂಟ್ ಮಾಡಿದ್ದಾರೆ.
ಇಷ್ಟೆಲ್ಲಾ ಬಯ್ದವರೇ ಹೆಚ್ಚಿದ್ದರೂ ಈ ವಿಡಿಯೋ ಇದಾಗಲೇ 8 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ವಿಡಿಯೋ ಅನ್ನು ಧೀರಜ್ ಛಬ್ರಾ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ಪುಟ್ಟನಾಯಿಗೆ ಇಂಥದೆಲ್ಲ ತಿನ್ನಿಸಬೇಡಿ ಎಂದು ಹಲವರು ಆಕೆಯ ಬುದ್ದಿ ಮಾತು ಹೇಳಿದರೆ, ರೀಲ್ಸ್ ಮಾಡಲು ಎಂತೆಂಥ ಕೆಟ್ಟದ್ದನ್ನು ಮಾಡುತ್ತಾರೆ ಎಂದು ಇನ್ನೂ ಕೆಲವರು ಕಿಡಿ ಕಾರಿದ್ದಾರೆ.