ಧೂಳು ಒರೆಸುವ ಬಟ್ಟೆಯನ್ನೇ ಅಸ್ತ್ರ ಮಾಡಿಕೊಂಡ ಮಹಿಳೆಯೊಬ್ಬಳು ತನ್ನ ಅಂಗಡಿಯನ್ನು ದೋಚಲು ಬಂದ ಕಳ್ಳನನ್ನು ಹಿಮ್ಮೆಟ್ಟಿಸಿರುವ ಪ್ರಸಂಗ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೆದರ್ಲ್ಯಾಂಡ್ಸ್ನಲ್ಲಿ ಬೇಕರಿ ಹೊಂದಿರುವ ಮಹಿಳೆಯು ಏಕಾಏಕಿ ತನ್ನ ಅಂಗಡಿಗೆ ನುಗ್ಗಿದ ಕಳ್ಳನನ್ನು ಯಾವುದೇ ಆಯುಧ ಇಲ್ಲದ ಹೊರತಾಗಿಯೂ ಕೇವಲ ಒಂದು ಬಟ್ಟೆಯನ್ನು ಬಳಸಿ ಧೈರ್ಯದಿಂದ ಬಡಿದು ವಾಪಸ್ ಕಳಿಸಲು ಯಶಸ್ವಿಯಾಗುತ್ತಾಳೆ.
ಡೆವೆಂಟರ್ನ ಮೆವ್ಲಾನಾ ಬೇಕರಿಯಲ್ಲಿ ಈ ಘಟನೆ ನಡೆದಿದೆ. ಟರ್ಕಿಶ್-ಡಚ್ ಬೇಕರ್ ತನ್ನ ಮಗನ ಬೇಕರಿಯಲ್ಲಿ ಕೌಂಟರ್ ಹಿಂದೆ ಇದ್ದಾಗ ಕಪ್ಪು ಬಟ್ಟೆ ಧರಿಸಿದ್ದ ದರೋಡೆಕೋರನು ಚಾಕು ಹಿಡಿದು ಅಂಗಡಿ ಪ್ರವೇಶಿಸಿದ್ದಾನೆ.
ಕ್ಯಾಶ್ ಕೌಂಟರ್ ಬಳಿ ಬಂದು ಹಣ ಎಗರಿಸಲು ಮುಂದಾಗುತ್ತಾನೆ. ಆಕಸ್ಮಿಕವಾಗಿ ಎದುರಾದ ಆಗಂತುಕನನ್ನು ಕಂಡ ಮಹಿಳೆ ಹೆದರುವುದಿಲ್ಲ. ಬದಲಿಗೆ, ದರೋಡೆಕೋರನ ಮುಖಕ್ಕೆ ಕ್ಲೀನಿಂಗ್ ಸ್ಪ್ರೇ ಮತ್ತು ಒರೆಸುವ ಬಟ್ಟೆಯಿಂದ ಹೊಡೆಯುತ್ತಾಳೆ, ಕೊನೆಗೆ ಆತನ ತಲೆಗೆ ಹೊಡೆದು ಆತನ ಕುತ್ತಿಗೆ ಅದುಮಿ ಹೋರಾಟ ಮಾಡುತ್ತಾಳೆ.
ಆಗ ಒಬ್ಬ ವ್ಯಕ್ತಿ ದರೋಡೆ ನಡೆಯುವುದನ್ನು ನೋಡಿ ಕಳ್ಳನನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೂ ಕಪ್ಪು ಬಟ್ಟೆಯಲ್ಲಿ ಬಂದಿದ್ದ ಕಳ್ಳ, ಆತನ ಹಿಡಿತದಿಂದ ಜಾರಿಕೊಂಡು ಹೊರಗೆ ಓಡಿಹೋಗುತ್ತಾನೆ.
ಲೇಖಕಿ ತನ್ಸು ಯೆಗೆನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸಿಸಿ ಟಿವಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಮಹಿಳೆಯ ಸಾಹಸ ಶ್ಲಾಘಿಸಿದ್ದಾರೆ.