
ಇದೀಗ ಗಾಜಿಯಾಬಾದ್‌ನಿಂದ ಇಂತಹ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ನವಜೋಡಿಗಳು ಪಿಸ್ತೂಲ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಭಾನುವಾರದಂದು ಗಾಜಿಯಾಬಾದ್‌ನ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಧು ಮತ್ತು ವರ ವಿವಾಹದ ವೇದಿಕೆಯಲ್ಲಿ ನಿಂತುಕೊಂಡಿದ್ದಾರೆ. ಬಳಿಕ ವರ ಪಿಸ್ತೂಲ್ ಹಿಡಿದು ಕೈ ಮೇಲೆತ್ತಿದಾಗ ವಧು ಕೂಡ ಜೊತೆಗೂಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಅತಿಥಿಗಳು ಶಿಳ್ಳೆ ಮತ್ತು ಚಪ್ಪಾಳೆ ತಟ್ಟುವ ಮುಖಾಂತರ ಪ್ರೋತ್ಸಾಹಿಸಿದ್ದಾರೆ.
ಅದೃಷ್ಟವಶಾತ್, ಗುಂಡಿನ ದಾಳಿಯಲ್ಲಿ ಯಾರಿಗೂ ಯಾವುದೇ ಗಾಯವಾಗಿಲ್ಲ. ಈ ವಿಡಿಯೋ ಈಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದು, ದಂಪತಿ ಯಾರೆಂಬುದು ಪತ್ತೆಯಾಗಿಲ್ಲ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕ ಸಭೆಗಳು, ಧಾರ್ಮಿಕ ಸ್ಥಳಗಳು, ಮದುವೆಗಳಲ್ಲಿ ಸಂಭ್ರಮಾಚರಣೆಯ ಗುಂಡು ಹಾರಿಸುವುದು ಅಕ್ಷಮ್ಯ ಅಪರಾಧವಾಗಿದೆ. ಪರವಾನಗಿ ಪಡೆದ ಬಂದೂಕುಗಳನ್ನು ಹೊಂದಿದ್ದರೂ, ಘಟನೆಯಲ್ಲಿ ಯಾರಿಗೂ ಗಾಯವಾಗದಿದ್ದರೂ ಸಹ ಇದು ಕ್ರಿಮಿನಲ್ ಅಪರಾಧವಾಗಿದೆ.