ಥಾಣೆ: ಈ ವಾರದ ಆರಂಭದಲ್ಲಿ ಥಾಣೆಯ ಹನುಮಂತನ ದೇವಾಲಯದಿಂದ ಕಾಣಿಕೆ ಪೆಟ್ಟಿಗೆಯನ್ನು ಕದಿಯಲಾಗಿತ್ತು. ದೇಣಿಗೆ ಪೆಟ್ಟಿಗೆಯನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ. ಈ ಸಂಬಂಧ ಘಟನೆಯ ಸಿಸಿ ಟಿವಿ ದೃಶ್ಯಾವಳಿ ವೀಕ್ಷಿಸಿದ ನೌಪದ ಪೊಲೀಸರಿಗೆ ನಗೆ ತರಿಸಿದೆ.
ಕಾಣಿಕೆ ಡಬ್ಬಿ ಕದಿಯುವ ಮೊದಲು ಕಳ್ಳ ಹನುಮಂತನ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವಾಲಯದ ಆವರಣದಲ್ಲಿ ಬಂದು ಕಳ್ಳ ಸುಮ್ಮನೆ ನಿಂತಿದ್ದಾನೆ. ನಂತರ ಅವನು ಹೊರಗೆ ನೋಡುತ್ತಾನೆ. ತನ್ನ ಫೋನ್ ತೆಗೆದು ಅದರ ಮುಖಾಂತರ ಸುತ್ತಲೂ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾನೆ. ತದನಂತರ ಅವನು ಫೋನ್ ಅನ್ನು ತನ್ನ ಜೇಬಿನೊಳಗೆ ಇಟ್ಟುಕೊಂಡು ವಿಗ್ರಹದ ಬಳಿಗೆ ಬರುತ್ತಾನೆ. ಬಳಿಕ ಖತರ್ನಾಕ್ ಕಳ್ಳ ಹನುಮಂತನ ಮೂರ್ತಿಯ ಪಾದಗಳನ್ನು ಮುಟ್ಟಿ, ಕಾಣಿಕೆ ಪೆಟ್ಟಿಗೆಯನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ.
ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆ ಕಳ್ಳತನವಾಗಿರುವುದನ್ನು ಗಮನಿಸಿದ ಥಾಣೆ ಕಬೀರವಾಡಿ ಹನುಮಂತ ದೇವಸ್ಥಾನದ ಅರ್ಚಕ ಮಹಂತ್ ಮಹಾವೀರದಾಸ್ ಮಹಾರಾಜ್ (57), ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಭೇದಿಸಿದ ಪೊಲೀಸರು ಖತರ್ನಾಕ್ ಕಳ್ಳನನ್ನು ಸೆರೆ ಹಿಡಿದಿದ್ದಾರೆ.