ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್ ರೆಡ್ ಲೈಟ್ ಬಿದ್ದರೂ ಹಲವಾರು ಮಂದಿ ಸಿಗ್ನಲ್ ಜಂಪ್ ಮಾಡುತ್ತಾರೆ. ಕೆಲವರು ರಸ್ತೆ ಖಾಲಿಯಿದೆ ಎಂದು ಸಿಗ್ನಲ್ ಜಂಪ್ ಮಾಡಿ ಅವಘಡಗಳಿಗೆ ತುತ್ತಾದವರಿದ್ದಾರೆ. ಇದೀಗ ಯುಎಸ್ ನಲ್ಲಿ ಹೀಗೆಯೇ ಸಿಗ್ನಲ್ ಜಂಪ್ ಮಾಡಲು ಹೋಗಿ ಮೂರು ಎಸ್ಯುವಿ ಕಾರುಗಳ ನಡುವೆ ನಡೆದ ಅಪಘಾತದ ವಿಡಿಯೋ ವೈರಲ್ ಆಗಿದೆ.
ವೈರಲ್ ಹಾಗ್ ಮೂಲಕ ಯೂಟ್ಯೂಬ್ ನಲ್ಲಿ ಈ ಅಪಘಾತದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಪಾದಚಾರಿಯೊಬ್ಬರು ಜೀಬ್ರಾ ಕ್ರಾಸಿಂಗ್‌ಗೆ ಅಡ್ಡಲಾಗಿ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಎಡಗಡೆಯಿಂದ ಬಂದಂತಹ ಎಸ್ಯುವಿ ಕಾರಿಗೆ ಎದುರುಗಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಒಂದು ಕಾರು ಹಾರಿ ಕೆಲವು ಅಡಿಗಳಷ್ಟು ದೂರ ಹೋಗಿದೆ. ಈ ವೇಳೆ ಹಿಂದೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಎಸ್ಯುವಿ ಕಾರಿನ ಬ್ಯಾನೆಟ್ ಮೇಲೆ ಕಾರು ಬಿದ್ದಿದೆ. ಈ ಘಟನೆಯು ಇಂಡಿಯಾನಾಪೊಲಿಸ್‌ನಲ್ಲಿ ಅಕ್ಟೋಬರ್ 17 ರಂದು ನಡೆದಿದೆ ಎಂದು ಹೇಳಲಾಗಿದೆ.
ಇನ್ನು ಈ ಅಪಘಾತದಲ್ಲಿ ಒಟ್ಟು ಆರು ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಾಗೂ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಈ ವಿಡಿಯೋವನ್ನು 25,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಯೂಟ್ಯೂಬರ್‌ಗಳು ವಿಡಿಯೋ ನೋಡಿ ದಿಗ್ಭ್ರಮೆಗೊಂಡಿದ್ದಾರೆ.