
ಹಾವುಗಳ ಹೆಸರು ಕೇಳಿದರೇನೆ ಬೆಚ್ಚಿಬೀಳುವಂತಾಗುತ್ತದೆ. ಅಂತದ್ದರಲ್ಲಿ ಹಾವೊಂದು ಬೈಕಿನ ಸ್ಪೀಡೋಮೀಟರ್ ಒಳಗೆ ಸೇರಿಕೊಂಡರೆ ಹೇಗಾಗಬೇಡ.
ಹೌದು, ಇಂತದೊಂದು ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ನಡೆದಿದ್ದು, ನಜೀರ್ ಖಾನ್ ಎಂಬವರು ಎಂದಿನಂತೆ ಕೆಲಸಕ್ಕೆ ತೆರಳುವ ಸಲುವಾಗಿ ಬೈಕ್ ಹೊರ ತೆಗೆಯುವಾಗ ಅವರಿಗೆ ಹಿಸ್ಸ್ ಹಿಸ್ಸ್ ಎಂಬ ಶಬ್ದ ಕೇಳಿ ಬಂದಿದೆ. ಏನಿರಬಹುದು ಎಂದು ಇಡೀ ಬೈಕ್ ಹುಡುಕಿದರೂ ಅವರಿಗೆ ಮೊದಲಿಗೆ ಗೊತ್ತಾಗಲಿಲ್ಲ.
ಕೊನೆಗೆ ಸ್ಟಾರ್ಟ್ ಮಾಡಲೆಂದು ಕೀ ಹಾಕಿದಾಗ ಸ್ಪೀಡೋ ಮೀಟರ್ ಒಳಗೆ ಸಿಲುಕಿಕೊಂಡಿರುವ ಹಾವು ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಆದನ್ನು ಹೊರ ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಅಷ್ಟರಲ್ಲಾಗಲೇ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದು, ಇದನ್ನು ನೋಡಲು ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ಅಂತಿಮವಾಗಿ ಸ್ಪೀಡೋಮೀಟರ್ ಒಡೆದು ಹಾವನ್ನು ಹೊರ ತೆಗೆಯಲಾಗಿದೆ.