ರಾಜಸ್ಥಾನದ ಕೋಟಾದ ಕೋಚಿಂಗ್ ಕೇಂದ್ರವೊಂದರ ಮುಸ್ಲಿಂ ವಿದ್ಯಾರ್ಥಿಗಳ ಗುಂಪೊಂದು ನಮಾಜ಼್ ಮಾಡುತ್ತಿರುವ ವೇಳೆಯೇ ಕೆಲ ವಿದ್ಯಾರ್ಥಿಗಳಿಂದ ’ಜೈ ಶ್ರೀರಾಮ್’ ಘೋಷಣೆ ಮೊಳಗಿದ ಘಟನೆಯ ವಿಡಿಯೋ ವೈರಲ್ ಆಗಿದೆ.
ಈ ಘಟನೆಯು ತರಗತಿಗಳ ವೇಳೆಯೇ ಜರುಗುತ್ತಿದೆ ಎಂದು ಮೇಲುನೋಟಕ್ಕೆ ಕಂಡು ಬರುತ್ತಿದೆ. ಸ್ಫರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರವಾಗಿರುವ ಕೋಟಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ವಿಡಿಯೋವನ್ನು ಗಮನಿಸಿದ ರಾಜಸ್ಥಾನ ಪೊಲೀಸ್ ಸಹಾಯವಾಣಿ ಹಾಗೂ ಕೋಟಾ ನಗರ ಪೊಲೀಸ್, ಈ ಘಟನೆ ನಡೆದಿದ್ದು 2020ರಲ್ಲಿ ಎಂದು ಸ್ಪಷ್ಟೀಕರಣ ಕೊಟ್ಟಿದ್ದು, ಆ ವೇಳೆ ಸಂಬಂಧ ಪಟ್ಟ ಸಂಸ್ಥೆಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸುವುದರೊಂದಿಗೆ, ಆ ಊರಿನಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ ಎಂದು ತಿಳಿಸಿದೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, “ಜಸ್ಟ್ ಒಂದು ಸರಳ ಪ್ರಶ್ನೆ: ನಮಾಜ಼್ ಮಾಡಲೆಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ವಿಶೇಷ ಕೋಣೆಯನ್ನು ಏಕೆ ನೀಡಲಾಗಿದೆ ? ಅವರು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಬಹುದಲ್ಲ ? ನಮಾಜ಼್ ಓಕೆಯಾದರೆ ಜೈ ಶ್ರೀರಾಮ ಏಕೆ ಓಕೆ ಅಲ್ಲ?” ಎಂದು ಪ್ರಶ್ನಿಸಿದ್ದಾರೆ.