ನಮ್ಮಲ್ಲಿ ಬಹುತೇಕರು ವಾಹನ ಚಾಲನೆ ಮಾಡುತ್ತಾ ಪ್ರವಾಸ ಹೋಗೋದಕ್ಕೆ ಇಷ್ಟಪಡ್ತಾರೆ. ಕೆಲವರು ಹಗಲಿನಲ್ಲಿ ವಾಹನ ಚಾಲನೆ ಮಾಡಲು ಇಷ್ಟಪಟ್ರೆ ಇನ್ನೂ ಕೆಲವರು ರಾತ್ರಿ ಹೊತ್ತು ವಾಹನ ಚಾಲನೆ ಮಾಡಲು ಇಷ್ಟಪಡ್ತಾರೆ. ಆದರೆ, ಹಗಲಿನಲ್ಲಿ ವಾಹನ ಚಾಲನೆ ಮಾಡುವುದಕ್ಕಿಂತ ರಾತ್ರಿ ಚಾಲನೆ ಅಪಾಯಕಾರಿಯಾಗಿದೆ. ಕಡಿಮೆ ಗೋಚರತೆಯಿಂದಾಗಿ ರಾತ್ರಿ ಹೊತ್ತು ವಾಹನ ಚಲಾಯಿಸುವುದು ಅಪಾಯಕಾರಿಯೇ ಹೌದು. ರಾತ್ರಿ ವಾಹನ ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುವ ಡ್ಯಾಶ್ ಕ್ಯಾಮ್ ವಿಡಿಯೋವೊಂದು ಇದೀಗ ವೈರಲ್ ಆಗಿದೆ,
ಕಿಯಾ ಸೆಲ್ಟೋಸ್ ಕಾರೊಂದು ನಾಲ್ಕು ಲೇನ್ ಹೆದ್ದಾರಿಯಲ್ಲಿ ಸಾಗುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಕಾರು ವೇಗವಾಗಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಎಮ್ಮೆಯೊಂದು ಇರುವುದು ವಾಹನ ಚಾಲಕನಿಗೆ ಕಾಣಿಸಿಲ್ಲ. ಕಾರು ಹತ್ತಿರ ಹೋಗುತ್ತಿದ್ದಂತೆ ಎಮ್ಮೆ ಇರುವುದು ಕಾಣಿಸಿದೆ. ಕೂಡಲೇ ಚಾಲಕ ಬ್ರೇಕ್ ಹಾಕಿದನಾದ್ರೂ ಅಪಘಾತವಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಕಾರು ಎಮ್ಮೆಗೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ಕಳೆದುಕೊಂಡಿತು. ಮೂರು ಬಾರಿ ಉರುಳಿ ರಸ್ತೆಯ ಬದಿಗೆ ತಳ್ಳಲ್ಪಟ್ಟಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಅನ್ನೋದನ್ನು ಅಪಘಾತದ ನಂತರ ಚಿತ್ರಗಳು ಬಹಿರಂಗಪಡಿಸಿವೆ. ಅಪಘಾತದ ತೀವ್ರತೆಗೆ ಕಿಯಾ ಸೆಲ್ಟೋಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ರಾತ್ರಿ ವಾಹನ ಚಾಲನೆ ಎಷ್ಟು ಅಪಾಯಕಾರಿ ಎಂಬುದನ್ನು ಈ ಕಾರಿನ ಡ್ಯಾಶ್ ಕ್ಯಾಮ್ ಫೂಟೇಜ್ ಬಹಿರಂಗಪಡಿಸಿದೆ. ಈ ಅಪಘಾತವು ನಾಲ್ಕು ಕಾರಣಗಳಿಂದ ಸಂಭವಿಸಿದೆ ಎಂದು ಹೇಳಬಹುದು. ಮೊದಲನೆಯದಾಗಿ ಜಾನುವಾರುಗಳನ್ನು ಹೆದ್ದಾರಿಗಳಿಂದ ಹೊರಗಿಡಲು ಸರ್ಕಾರದ ಅಸಮರ್ಥತೆ, ರಸ್ತೆಯಲ್ಲಿ ಬೆಳಕಿಲ್ಲದೇ ಇರುವುದು. ಅತಿಯಾದ ವೇಗದ ಚಾಲನೆ ಮತ್ತು ಕಳಪೆ ಹೆಡ್ಲೈಟ್ ಬೆಳಕಿನಿಂದ ಇದು ಸಂಭವಿಸಿದೆ.