ಸಮಯಕ್ಕೆ ಸರಿಯಾಗಿ ಬರದ ರೈಲು, ಮುಂಗಡ ಬುಕ್ ಮಾಡಿದ್ರೂ ಸೀಟ್ ಸಿಗ್ತಿಲ್ಲ, ರೈಲಿನಲ್ಲಿ ಸ್ವಚ್ಚತೆ ಇಲ್ಲ ಎಂಬೆಲ್ಲಾ ದೂರುಗಳು ಇತ್ತೀಚಿಗೆ ಭಾರತೀಯ ರೈಲ್ವೆ ಸೇವೆಯ ಬಗ್ಗೆ ಕೇಳಿಬರ್ತಿವೆ. ಇದೀಗ ತುಂಬಿದ ರೈಲು ಹತ್ತಲು ಜನ ಕಿಟಕಿನಿಂದ ನುಗ್ತಿರುವ ವಿಡಿಯೋವೊಂದು ಹರಿದಾಡ್ತಿದ್ದು ರೈಲ್ವೆ ಸೇವೆಯ ಬಗ್ಗೆ ಮತ್ತೆ ಚರ್ಚೆಯಾಗಲು ಕಾರಣವಾಗಿದೆ.
ಉಜ್ಜಯಿನಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಗಾಧ ಜನಸಂದಣಿಯಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದೆ. ಕೌ ಮೊಮ್ಮ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು “ಕಿಟಕಿಗಳು ಹೇಗಾದರೂ ಸಣ್ಣ ಬಾಗಿಲುಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ವಿಡಿಯೋ ಕ್ಲಿಪ್ ನಲ್ಲಿ ಪ್ರಯಾಣಿಕರು ಕಿಟಕಿಗಳ ಮೂಲಕ ರೈಲಿನ ಕೋಚ್‌ಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ರೈಲಿನಲ್ಲಿ ಪ್ರಯಾಣಿಸಲು ಅವರಿಗಿರುವ ತುರ್ತು ಪರಿಸ್ಥಿತಿ ಮತ್ತು ಸಂಕಟವನ್ನು ಈ ವಿಡಿಯೋ ಎತ್ತಿ ತೋರಿಸುತ್ತದೆ. ವಿಡಿಯೋ ವೈರಲ್ ಆಗ್ತಿದ್ದಂತೆ ರೈಲಿನ ಲಭ್ಯತೆ ಮತ್ತು ಪ್ರಯಾಣಿಕರ ಸುರಕ್ಷತೆ ಬಗ್ಗೆ ದನಿ ಎತ್ತಿರುವ ನೆಟ್ಟಿಗರು, ಪ್ರಯಾಣಿಕರು ಕಿಟಕಿಗಳ ಮೂಲಕ ಕೋಚ್ ಪ್ರವೇಶಿಸುವುದು ಅಪಾಯಕಾರಿ ಎಂದು ಹೇಳಿದ್ದು ಈ ವಿಷಯವನ್ನು ಪರಿಶೀಲಿಸಲು ಭಾರತೀಯ ರೈಲ್ವೆಯನ್ನು ಟ್ಯಾಗ್ ಮಾಡಿದ್ದಾರೆ. “ಭಾರತಕ್ಕೆ ಹೆಚ್ಚು ಕೈಗೆಟುಕುವ ರೈಲುಗಳು ಮತ್ತು ಬಸ್ಸುಗಳು ಬೇಕು ಅತಿಯಾದ ವಂದೇ ಭಾರತವಲ್ಲ!” ಎಂದಿದ್ದಾರೆ.