ನಿಂತ ಮಳೆ ನೀರಲ್ಲಿ ರಸ್ತೆ ದಾಟುವ ವೇಳೆ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ. ತೆಲಂಗಾಣದ ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಬಹದ್ದೂರ್‌ಪುರ ಪ್ರದೇಶದ ಜಲಾವೃತವಾಗಿತ್ತು. ಈ ವೇಳೆ 40 ವರ್ಷದ ಹಣ್ಣು ಮಾರಾಟಗಾರರೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ವಿದ್ಯುತ್ ಕಂಬ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಮೃತರನ್ನು ಫಕ್ರು ಎಂದು ಗುರುತಿಸಲಾಗಿದ್ದು, ಮಳೆನೀರು ಹರಿಯುತ್ತಿದ್ದ ವೇಳೆ ರಸ್ತೆಯನ್ನು ದಾಟಲು ವಿದ್ಯುತ್ ಕಂಬಕ್ಕೆ ಒರಗಿದ ತಕ್ಷಣ ವಿದ್ಯುತ್ ಹರಿದಿದೆ.
ಆರಂಭದಲ್ಲಿ ವ್ಯಕ್ತಿ ಕುಡಿದು ಬಿದ್ದಿದ್ದಾನೆಂದು ಸಾರ್ವಜನಿಕರು ಭಾವಿಸಿ ನಿರ್ಲಕ್ಷಿಸಿದರು. ನಂತರ ಬಹದ್ದೂರ್‌ಪುರ ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬರುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ಸಿಬ್ಬಂದಿ ಘೋಷಿಸಿದರು.
ಈ ಘಟನೆ ಫುಟ್‌ಪಾತ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು ಎದೆ ನಡುಗಿಸಿದೆ. ಬಹದ್ದೂರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.