ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಸಾರಿಗೆ ನಿಗಮದ ಬಸ್ ನಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಪುರುಷನಿಗೆ ಮಹಿಳೆ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ವೇಳೆ ಬಸ್ ನಲ್ಲಿದ್ದ ಇತರ ಪ್ರಯಾಣಿಕರು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸಿರುವ ರೀತಿ ಸಾಕಷ್ಟು ಚರ್ಚೆ ಮತ್ತು ಆತಂಕ ಹುಟ್ಟುಹಾಕಿದೆ. ಪ್ರಯಾಣಿಕರ ಉದಾಸೀನತೆ ಸಾರ್ವಜನಿಕ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದ್ದು ನೆಟ್ಟಿಗರನ್ನು ಕೆರಳಿಸಿದೆ.
ಕಿಕ್ಕಿರಿದ ಬಸ್‌ನಲ್ಲಿ ಪುರುಷನೊಬ್ಬ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದನ್ನು ಮಹಿಳೆ ಪ್ರಶ್ನಿಸಿದ್ದಾರೆ. ಕ್ಷಮೆ ಕೇಳುವ ಬದಲು ಪುರುಷ, ಮಹಿಳೆಯ ಮೇಲೆ ಮಾತಿನ ದಬ್ಬಾಳಿಕೆ ನಡೆಸಿದ್ದಾನೆ. ಈ ವೇಳೆ ಮಹಿಳೆ ಮತ್ತು ಪುರುಷನ ನಡುವೆ ಗಲಾಟೆ, ಹಲ್ಲೆ ನಡೆದಿದೆ. ಆದರೆ ಅಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿದ್ದರೂ ಯಾರೂ ಸಹ ಹಲ್ಲೆಯನ್ನು ನಿಲ್ಲಿಸಲು ಮುಂದಾಗುವುದಿಲ್ಲ. ಬಸ್ಸಿನಲ್ಲಿ ಕೆಲವರಂತೂ ಮಹಿಳೆಯ ದುಃಖವನ್ನು ನೋಡುತ್ತಾ ನಿಂತಿರುತ್ತಾರೆ.
ಈ ವೀಡಿಯೊವು ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಜನನಿಬಿಡ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣದಂತಹ ಸಮಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಕಿರುಕುಳ ನೀಡುವ ಸಮಸ್ಯೆಯನ್ನು ಮತ್ತೆ ಬೆಳಕಿಗೆ ತಂದಿದೆ.