ರಾಯಗಢ: ಚಲಿಸುತ್ತಿರುವ ರೈಲಿಗೆ ಹತ್ತುವುದು ಅಪಾಯಕಾರಿ ಎಂದು ಎಷ್ಟು ಹೇಳಿದ್ರೂ, ಜನರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮುಂಬೈ ಸಮೀಪದ ಪನ್ವೇಲ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಹತ್ತಲು ಪ್ರಯತ್ನಿಸಿ, ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ.
ಮಹಿಳೆಯು ತನ್ನ ಪುತ್ರನ ಜೊತೆ ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ್ದಾಳೆ. ಪನ್ವೇಲ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನ ಬಿ-2 ಕೋಚ್ ಹತ್ತಲು ಪ್ರಯತ್ನಿಸಿ, ಸಮತೋಲನ ಕಳೆದುಕೊಂಡಿದ್ದಾರೆ. ರೈಲು ಮತ್ತು ಫ್ಲ್ಯಾಟ್ ಫಾರ್ಮ್ ನಡುವಿನ ಅಂತರದಲ್ಲಿ ಬಿದ್ದ ಕೂಡಲೇ ಅವರನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಿಳೆಯನ್ನು ಜ್ಞಾನದೇವಿ ರಾಣಾ ಎಂದು ಗುರುತಿಸಲಾಗಿದೆ. ಸೆಂಟ್ರಲ್ ರೈಲ್ವೆ ಮುಂಬೈ ವಿಭಾಗದ ಪನ್ವೆಲ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 6 ರಲ್ಲಿ ಈ ಘಟನೆ ನಡೆದಿದೆ. ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೇಬಲ್ ಕೆ.ಆರ್. ಮೀನಾ ಅವರು ರೈಲಿನ ಕೆಳಗೆ ಬೀಳುತ್ತಿದ್ದ ಅವರನ್ನು ರಕ್ಷಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಗಂಭೀರ ಗಾಯಗೊಂಡಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.