
ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಭಾವಿ ಹೆಸರು ಎಂದೇ ಪರಿಗಣಿಸಲಾಗಿರುವ ಜನಸತ್ತಾ ದಳದ ಅಧ್ಯಕ್ಷ ಹಾಗೂ ಕುಂದ್ರ ಕ್ಷೇತ್ರದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ, ಅಧಿವೇಶನಕ್ಕೆ ಆಗಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದ ಮುಟ್ಟಿ, ನಮಸ್ಕರಿಸಿದ್ದಾರೆ. ಅವರ ಈ ನಡೆ ಈಗ ಉತ್ತರ ಪ್ರದೇಶ ರಾಜಕೀಯದಲ್ಲಿ ಕೆಲವೊಂದು ಊಹಾಪೋಹಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ರಾಜಾ ಭಯ್ಯಾ, ಬಿಜೆಪಿಯನ್ನು ಬೆಂಬಲಿಸಿದ್ದು ಇದರ ಮಧ್ಯೆಯೂ ಬಿಜೆಪಿ ಸಾಧನೆ ತೃಪ್ತಿಕರವಾಗಿರಲಿಲ್ಲ. ಹೀಗಾಗಿ ಯೋಗಿ ಆದಿತ್ಯನಾಥ್ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದಕ್ಕೆಲ್ಲ ತಿಲಾಂಜಲಿ ಇಡುವಂತೆ ಮುಂಬರುವ ಚುನಾವಣೆಯ ಸಂಪೂರ್ಣ ನೇತೃತ್ವವನ್ನು ಯೋಗಿ ಆದಿತ್ಯನಾಥ್ ಅವರಿಗೆ ಬಿಜೆಪಿ ಹೈಕಮಾಂಡ್ ವಹಿಸಿಕೊಟ್ಟಿದೆ. ಇದರ ಮಧ್ಯೆ ರಾಜಾ ಭಯ್ಯಾ ಅವರಂತಹ ಪ್ರಭಾವಿ ನಾಯಕರನ್ನು ಯೋಗಿ ಆದಿತ್ಯನಾಥ್ ಸೆಳೆಯಲು ಯಶಸ್ವಿಯಾಗಿರುವುದು ಅವರ ಜಾಣ ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.