
ಅದೆಷ್ಟೋ ಕುಟುಂಬದಲ್ಲಿ ಶ್ರೀಮಂತಿಕೆಯಿದ್ದರೂ ಪ್ರೀತಿಗೆ-ವಿಶ್ವಾಸಕ್ಕೆ ಮಾತ್ರ ಬರ, ಅದೆಷ್ಟು ಸಂಪತ್ತು, ಐಶ್ವರ್ಯ ಇದ್ದರೂ ನೆಮ್ಮದಿ, ಸಂತೋಷ ವಿಶ್ವಾಸಕ್ಕೆ ಕೊರತೆ…. ಆದರೆ ಅದೆಷ್ಟೋ ಬಡವರಲ್ಲಿ ಶ್ರೀಮಂತಿಕೆ ಇಲ್ಲದಿದ್ದರೂ ಪ್ರೀತಿ, ವಿಶ್ವಾಸಕ್ಕೆ ಮಾತ್ರ ಕೊರತೆ ಇರಲ್ಲ….ಕಷ್ಟವಿದ್ದರೂ ನೆಮ್ಮದಿಯಿಂದ ಬದುಕಿನ ಬಂಡಿ ಸಾಗಿಸುತ್ತಿರುತ್ತಾರೆ. ಸಾಮಾಜಿಕ ಜಾಲಣಗಳಲ್ಲಿವೈರಲ್ ಆಗಿರುವ ವಿಡಿಯೋವೊಂದು ಎಲ್ಲರನ್ನು ನಿಬ್ಬೆರಗಾಗಿಸುವಂತಿದೆ.
ಹೊತ್ತಿನ ಊಟಕ್ಕಾಗಿ ಕುಟುಂಬವೊಂದು ರಸ್ತೆ ಬದಿ ದೊಂಬರಾಟ, ಸಣ್ಣಪುಟ್ಟ ಸರ್ಕಸ್ ಮಾಡಿ ಜೀವನ ಸಾಗಿಸುತ್ತಿದೆ. ವ್ಯಕ್ತಿಯೋರ್ವ ನೆಲದ ಮೇಲೆ ಮಲಗಿ ತನ್ನ ಎರಡು ಕೈಗಳ ಮೇಲೆ ಹಿರಿಯ ಮಗಳು ನಿಂತು ಸಾಹಸ ಮಾಡುತ್ತಿರುವಂತೆ ಸಪೋರ್ಟ್ ಮಾಡುತ್ತಿದ್ದಾನೆ. ಆತನ ಪತ್ನಿ ಪಕ್ಕದಲ್ಲಿಯೇ ಡ್ರಮ್ ಬಾರಿಸುತ್ತಾ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾಳೆ. ದಂಪತಿಯ ಪುಟ್ಟ ಕಂದಮ್ಮ ಅಮ್ಮನನ್ನು ಹಿಂಬದಿಯಿಂದ ಬಂದು ತಬ್ಬಿ ಪ್ರೀತಿಯಿಂದ ಮುತ್ತಿಡುತ್ತಾ ಆಡುತ್ತಿದ್ದಾಳೆ. ವಾತ್ಸಲ್ಯಮಯಿ ತಾಯಿ ಮುಖದಲ್ಲಿ ಮೂಡುವ ಮಂದಹಾಸ… ನಿಜಕ್ಕೂ ಬರೆಯಲು ಪದಗಳು ಸಾಲದು… ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಕುಟುಂಬದಲ್ಲಿ ಪ್ರೀತಿಗೆ ಮಾತ್ರ ಬಡತನವಿಲ್ಲ.
ಈ ವಿಡಿಯೋ ನೋಡಿದರೆ ನಾನು ಬಡವ….ನೀನು ಬಡವಿ… ನಮ್ಮ ಪ್ರೀತಿಗೆ ಬಡತನವಿಲ್ಲ…. ಎಂಬ ಹಾಡಿನ ಸಾಲು ನೆನಪಾಗದಿರದು.