ಲಾಹೋರ್: ಮೊಸರು ಖರೀದಿಸುವುದಕ್ಕಾಗಿ ರೈಲನ್ನು ನಿಲುಗಡೆ ಮಾಡಿರುವ ಅಚ್ಚರಿಯ ಘಟನೆ ಪಾಕಿಸ್ತಾನದ ಲಾಹೋರ್‌ನ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಚಾಲಕ ಹಾಗೂ ಸಹಾಯಕ ರೈಲನ್ನು ನಿಲುಗಡೆ ಮಾಡಿ ಅಂಗಡಿಯಿಂದ ಮೊಸರು ಪ್ಯಾಕೆಟ್ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಚಾಲಕ ರೈಲಿಗೆ ಹಿಂತಿರುಗುವ ಮೊದಲು ಅಂಗಡಿಯಿಂದ ಮೊಸರನ್ನು ತೆಗೆದುಕೊಂಡು ಹೋಗುವುದನ್ನು ನೋಡಬಹುದು.
ಈ ಘಟನೆಯು ಪಾಕಿಸ್ತಾನದಲ್ಲಿ ರೈಲ್ವೆಯ ಸುರಕ್ಷತೆಯ ಬಗ್ಗೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಪ್ಪು ನಿರ್ವಹಣೆ ಮತ್ತು ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸೋದು ಅಲ್ಲಿ ಸಾಮಾನ್ಯವಾಗಿದೆ. ರೈಲ್ವೆ ಸಿಬ್ಬಂದಿಯನ್ನು ರಾಣಾ ಮೊಹಮ್ಮದ್ ಶೆಹಜಾದ್ ಮತ್ತು ಆತನ ಸಹಾಯಕ ಇಫ್ತಿಕರ್ ಹುಸೇನ್ ಎಂದು ಗುರುತಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ, ಚಾಲಕ ಮತ್ತು ಸಹಾಯಕನನ್ನು ರೈಲ್ವೆ ಸಚಿವ ಅಜಂ ಖಾನ್ ಅಮಾನತುಗೊಳಿಸಿದ್ದಾರೆ.
ರೈಲನ್ನು ಹಳಿಗಳ ಮಧ್ಯದಲ್ಲಿ ನಿಲ್ಲಿಸಿದರೆ ಸುರಕ್ಷತೆಯ ಸಮಸ್ಯೆಯಾಗುತ್ತದೆ. ಸುರಕ್ಷತೆಯೇ ಸರ್ಕಾರದ ಆದ್ಯತೆಯಾಗಿದ್ದು, ಇದಕ್ಕೆ ಧಕ್ಕೆ ತರುವ ಯಾವುದನ್ನೂ ಕೂಡ ಸಹಿಸುವುದಿಲ್ಲ ಎಂದು ರೈಲ್ವೇ ಸಚಿವಾಲಯದ ವಕ್ತಾರ ಸೈಯದ್ ಇಜಾಜ್-ಉಲ್-ಹಸನ್ ಶಾ ತಿಳಿಸಿದ್ದಾರೆ.